ಪಟ್ಲಬೆಟ್ಟದಲ್ಲಿ ರಸ್ತೆ ನಿರ್ಮಾಣ: ಅರಣ್ಯಾಧಿಕಾರಿಗಳಿಂದ ವರದಿ ಕೇಳಿದ ಸಚಿವ ಈಶ್ವರ್ ಖಂಡ್ರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಕಲೇಶಪುರ ತಾಲೂಕಿನ ನಿಸರ್ಗ ರಮಣೀಯ ತಾಣವಾದ ಪಟ್ಲಬೆಟ್ಟದಲ್ಲಿ ರಸ್ತೆ ನಿರ್ಮಿಸಲಾಗಿರುವ ಕುರಿತು ಅರಣ್ಯಸಚಿವ ಈಶ್ವರ ಬಿ.ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಪತ್ರ ಮುಖೇನ ವರದಿ ಕೇಳಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಿಸಲೆ ಅರಣ್ಯ ವ್ಯಾಪ್ತಿಯ ಪಟ್ಲಬೆಟ್ಟಕ್ಕೆ ಅನುಮತಿ ಇಲ್ಲದೆ ವಾಹನ ಓಡಾಟಕ್ಕೆ ಖಾಸಗಿಯಾಗಿ ರಸ್ತೆ ನಿರ್ಮಿಸಲಾಗಿದೆ . ರಸ್ತೆಗಾಗಿ ಅನಧಿಕೃತವಾಗಿ ಮರ ಕಡಿಯಲಾಗಿದೆ ಎಂದು ಉಲ್ಲೇಖಿಸಲಾದ ಕಾರಣ ಪಟ್ಲಬೆಟ್ಟಕ್ಕೆ ನಿರ್ಮಿಸಲಾಗಿರುವ ರಸ್ತೆ ಅಧಿಕೃತವೇ, ನಿಯಮಾನುಸಾರ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯಲಾಗಿದೆಯೇ, ಇಲ್ಲಿ ರಸ್ತೆ ನಿರ್ಮಾಣಕ್ಕೆ ಮರ ಕಡಿಯಲು ಅನುಮತಿ ಪಡೆಯಲಾಗಿತ್ತೆ ಇಲ್ಲವೆ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಹಾಗೂ ಒಂದೊಮ್ಮೆ ಅನುಮತಿ ಇಲ್ಲದೆ ರಸ್ತೆ ನಿರ್ಮಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಮತ್ತು ಕರ್ತವ್ಯ ಲೋಪ ಎಸಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ನಿರ್ದೇಶಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವಾಸಿ ತಾಣ ಪಟ್ಲಬೆಟ್ಟದಲ್ಲಿ ಕೆಲ ದಿನಗಳ ಹಿಂದೆ ಬೈಕ್ ಸವಾರರೋರ್ವರ ಮೇಲೆ ಸ್ಥಳೀಯ ಜೀಪು ಚಾಲಕರು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಹಲ್ಲೆಗೊಳಗಾದ ಯುವಕ ನೀಡಿದ ದೂರಿನಂತೆ ಸಕಲೇಶಪುರ ತಾಲೂಕಿನ ಯಸಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ನಡೆಸಿ ಆರೋಪದಲ್ಲಿ ನಾಲ್ವರನ್ನು ಬಂಧಿಸಿದ್ದರು.

ಹಲ್ಲೆ ನಡೆಸಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು. ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಪಟ್ಲಬೆಟ್ಟದ ಘಟನೆಗೆ ಸೂಕ್ತ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!