ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಇಂದು ತಮ್ಮ ಅಧಿಕಾರಾವಧಿಯ ಎರಡು ವರ್ಷ ಪೂರೈಸಿದ್ದು, ಈ ಹಿನ್ನೆಲೆ ರಾಜಭವನದಲ್ಲಿ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಇತ್ತ ಈ ಕ್ರಮವು ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಇದರ ನಡುವೆ ವಿರೋಧ ಪಕ್ಷಗಳು ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿ, ಅವರು ಸ್ವ-ಪ್ರಾಮುಖ್ಯತೆಯ ಉಬ್ಬಿಕೊಂಡಿರುವ ಭಾವನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಂಗಾಳದ ರಾಜಭವನದ ಆವರಣದಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆ ಉದ್ಘಾಟನೆಗೂ ಮುನ್ನ ಅವರ ಪ್ರತಿಮೆಯನ್ನು ವಿಧ್ಯುಕ್ತವಾಗಿ ಅನಾವರಣಗೊಳಿಸಲಾಯಿತು. ರಾಜ್ಯಪಾಲರು ಅಧಿಕಾರದಲ್ಲಿರುವಾಗಲೇ ಅವರ ಪ್ರತಿಮೆಯನ್ನು ಸ್ಥಾಪಿಸಿದ ಬಗ್ಗೆ ಟೀಕೆಗಳು ಭುಗಿಲೆದಿದ್ದು, ಪ್ರತಿಮೆ ಅನಾವರಣದ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಹಾಗೂ ನೆಟ್ಟಿಗರು ರಾಜ್ಯಪಾಲರು ತಮ್ಮನ್ನು ತಾವು ಶ್ಲಾಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ನಡುವೆ ಬಂಗಾಳದಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಚವು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೊಂದು ಪ್ರಚಾರದ ಸ್ಟಂಟ್ ಎಂದು ಬಣ್ಣಿಸಿದೆ. “ನಮ್ಮ ರಾಜ್ಯಪಾಲರಾದ ಸಿ.ವಿ.ಆನಂದ ಬೋಸ್ ಅವರು ತಮ್ಮದೇ ಆದ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ, ಇದು ಇತಿಹಾಸದಲ್ಲೇ ಕೇಳಿರದ ಸಂಗತಿಯಾಗಿದೆ. ಅವರು ಯಾವುದೋ ಪ್ರಚಾರಕ್ಕಾಗಿ ಇದನ್ನು ಮಾಡಿದ್ದಾರೆ. ಆದರೆ ಬಹಳ ಮುಖ್ಯವಾದ ವಿಷಯವೆಂದರೆ, ಅವರ ಮುಂದಿನ ಹೆಜ್ಜೆ ಏನು? ಅವರು ತಮ್ಮದೇ ಪ್ರತಿಮೆಗೆ ಹಾರ ಹಾಕುತ್ತಾರೆಯೇ? ಇದು ಮೆಗಾಲೊಮೇನಿಯಾಕ್ನ ಸಂಕೇತ ಎಂದು ತೃಣಮೂಲ ವಕ್ತಾರ ಜಯಪ್ರಕಾಶ್ ಮಜುಂದಾರ್ ಅವರು ಹೇಳಿದ್ದಾರೆ.
ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಇದನ್ನು “ನಾಚಿಕೆಗೇಡು” ಎಂದು ಕರೆದಿದ್ದಾರೆ. “ರಾಜಭವನ ಹೊತ್ತಿ ಉರಿದು ಕುಳಿತಿರುವುದು ನಾಚಿಕೆಗೇಡು. ಇದು ನಮ್ಮ ರಾಜ್ಯದ ದೌರ್ಭಾಗ್ಯ” ಎಂದು ಹೇಳಿದರು. ಕಾಂಗ್ರೆಸ್ ವಕ್ತಾರೆ ಸೌಮ್ಯಾ ಐಚ್ ರಾಯ್ ಅವರು, “ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಬಂಗಾಳದ ಸಂಸ್ಕೃತಿಯ ಮೇಲೆ ರಾಜ್ಯಪಾಲರಿಂದ ಸಣ್ಣ ಆಟವನ್ನು ಆಡಲಾಗುತ್ತಿದೆ” ಎಂದು ಅವರು ಹೇಳಿದರು. ಮೂಲಗಳ ಪ್ರಕಾರ, ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದೊಂದಿಗೆ ಸಂಯೋಜಿತವಾಗಿರುವ ಕಲಾವಿದ ಪಾರ್ಥ ಸಹಾ ಅವರು ಈ ಪ್ರತಿಮೆಯನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಹಾ ಅವರು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗದೆ ಅವರ ಭಾವಚಿತ್ರವನ್ನು ಆಧರಿಸಿ ಫೈಬರ್ ಪ್ರತಿಮೆಯನ್ನು ರಚಿಸಿದ್ದಾರೆ ಎನ್ನಲಾಗಿದೆ.
ಈ ಪ್ರತಿಮೆಯನ್ನು ಗವರ್ನರ್ ಬೋಸ್ ಅವರೇ ಸ್ಥಾಪಿಸಿಲ್ಲ, ಆದರೆ ಇದು ಕಲಾವಿದರು ಮತ್ತು ಭಾರತೀಯ ವಸ್ತುಸಂಗ್ರಹಾಲಯದಿಂದ ಉಡುಗೊರೆಯಾಗಿದೆ ಎಂದು ರಾಜ್ಯಪಾಲರ ಕಚೇರಿ ಸ್ಪಷ್ಟಪಡಿಸಿದೆ. ಹೀಗಿದ್ದರೂ, ಈ ಘಟನೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಜೀವಂತ ವ್ಯಕ್ತಿಯ ಪ್ರತಿಮೆ ಸ್ಥಾಪಿಸುವ ಔಚಿತ್ಯವನ್ನು ಹಲವರು ಪ್ರಶ್ನಿಸಿದ್ದಾರೆ.