ಹೊಸದಿಗಂತ ವರದಿ ಮಂಡ್ಯ :
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಪೆಟ್ರೋಲ್-ಡೀಸೆಲ್ ತೆರಿಗೆ ಹೆಚ್ಚಳ ವಿರೋಧಿಸಿ ನಾಳೆ (ಜೂ. 20) ರಾಜ್ಯಾದ್ಯಂತ ಬಿಜೆಪಿ ವತಿಯಿಂದ ರಸ್ತೆ ತಡೆ ನಡೆಸಲಾಗುತ್ತದೆ ಎಂದು ರಾಜ್ಯ ವಕ್ತಾರ ಎಂ.ಜಿ. ಮಹೇಶ್ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಒಳ್ಳೆಯ ಆಡಳಿತ ನೀಡಬೇಕಾದ ಸರ್ಕಾರ ಅಸಮರ್ಥ ಆಡಳಿತ ನೀಡುತ್ತಿದೆ ಎಂದು ಆರೋಪಿಸಿದರು.
ಜನಾದೇಶಕ್ಕೆ ಅಪಹಾಸ್ಯ ಮಾಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತೆಲಂಗಾಣದ ಚುನಾವಣಾ ಖರ್ಚಿಗಾಗಿ ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿ ರಾಜ್ಯದ ಜನರಿಗೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ ಸ್ವತಃ ಪ್ರಧಾನಿ ಮೋದಿಯವರೇ ಇಂಧನ ಮೇಲಿನ ತೆರಿಗೆ ಕಡಿಮೆ ಮಾಡಿ ಎಲ್ಲ ರಾಜ್ಯಗಳಿಗೂ ತೆರಿಗೆ ಕಡಿಮೆ ಮಾಡಿ ಜನರಿಗೆ ಆಗುವಂತಹ ಹೊರೆ ಇಳಿಸಬೇಕು ಎಂದು ಮನವಿ ಮಾಡಿದ್ದರು. ಅದರಂತೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು 3 ರೂ. ಇಳಿಸುವ ಮೂಲಕ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗಿಂತಲೂ ಕಡಿಮೆ ದರ ಕರ್ನಾಟಕದಲ್ಲಿತ್ತು. ಆದರೆ. ಸಿದ್ದರಾಮಯ್ಯ ಸರ್ಕಾರ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಿದ್ದಾರೆ ಎಂದು ದೂರಿದರು.