ಹೊಸದಿಗಂತ ವರದಿ, ವಿಜಯಪುರ:
ಜಿಲ್ಲೆಯಲ್ಲಿ ತೀವ್ರ ಆತಂಕ ಮೂಡಿಸಿದ್ದ ನಗರ ಹೊರ ವಲಯ ಜೈನಾಪುರ ಲೇಔಟ್‌ನ ಮನೆಯೊಂದಕ್ಕೆ ದರೋಡೆಕೋರರು ನುಗ್ಗಿ, ಮನೆಯ ಮಾಲೀಕನಿಗೆ ಚಾಕು ಇರಿದು, ಒಂದನೇ ಅಂತಸ್ತಿನಿಂದ ಕೆಳಗೆ ಬೀಳಿಸಿ, ಮನೆಯಲ್ಲಿದ್ದ ಮಹಿಳೆಯ ೧೫ ಗ್ರಾಂ ಚಿನ್ನದ ತಾಳಿ ಕಿತ್ತುಕೊಂಡು ಪರಾರಿಯಾಗಿದ್ದ ೩ ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಏಕತಾ ನಗರದ ಸುರೇಶ ವಿಶ್ವಲ ಮದುಕರ ಚವ್ಹಾಣ (೪೨), ಸೂರಜ್ ತುಳಸಿರಾಮ ಚವ್ಹಾಣ (೩೨), ಆಕಾಶ ಅಕ್ಷಯ ಸುಖದೇವ ರಾವತ್ (೩೧) ಬಂಧಿತ ಆರೋಪಿಗಳಾಗಿದ್ದು, ಇನ್ನು ಇತರೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ಆರೋಪಿಗಳು ಇಲ್ಲಿನ ಜೈನಾಪುರ ಲೇಔಟ್‌ನ ಸಂತೋಷ ಕನ್ನಾಳ ಎಂಬವರ ಮನೆಗೆ ರಾತ್ರಿ ನುಗ್ಗಿ, ಚಾಕು ಇರಿದು, ಮನೆಯ ಒಂದನೇ ಅಂತಸ್ತನಿಂದ ಕೆಡವಿ, ಸಂತೋಷ ಅವರ ಪತ್ನಿಯ ಕೊರಳಲ್ಲಿನ ಚಿನ್ನದ ತಾಳಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಸಂತೋಷ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆ ನಗರ ಸೇರಿದಂತೆ ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಅವರ ಮಾಗದರ್ಶನದಲ್ಲಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಪೊಲೀಸ್ ಅಧಿಕಾರಿ ಸುನೀಲ ಕಾಂಬಳೆ, ಪ್ರದೀಪ ತಳಕೇರಿ, ಪಿಎಸ್‌ಐ ರಾಜು ಮಮದಾಪುರ, ಸೋಮೇಶ ಗೆಜ್ಜಿ, ವಿನೋದ ಪೂಜಾರಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.
ಈ ಸಂಬಂಧ ಗಾಂಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.