ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ, ನಿರ್ದೇಶಕ ರಾಕ್‌ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ಉಪೇಂದ್ರ ಬಹದ್ದೂರ್ ಶಾಹಿ, ನಾರಾ ಬಹದ್ದೂರ್ ಶಾಹಿ, ಖಾಕೇಂದ್ರ ಬಹದ್ದೂರ್ ಶಾಹಿ, ಕೋಮಲ್ ಶಾಹಿ, ಸ್ವಸ್ತಿಕ್ ಶಾಹಿ, ಪಾರ್ವತಿ ಶಾಹಿ ಹಾಗೂ ಶಾದಲ ಶಾಹಿ ಎಂದು ಗುರುತಿಸಲಾಗಿದೆ.
ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ರಾಕ್‌ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಅವರು ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಪ್ರವಾಸದಿಂದ ಮನೆಗೆ ಹಿಂದಿರುಗಿದ ಬಳಿಕ ಕಳ್ಳತನವಾಗಿರುವುದು ಗೊತ್ತಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಚುರುಕಾಗಿ ತನಿಖೆ ನಡೆಸಿದ್ದರು.
ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಇದೀಗ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಒಂದೂವರೆ ಕೋಟಿ ರೂ ಮೌಲ್ಯದ ಚಿನ್ನ. ಬೆಳ್ಳಿ ವಶಕ್ಕೆ ಪಡೆದಿದ್ದಾರೆ.