ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಅಂತಿಮ ಘಟ್ಟ ತಲುಪಿದೆ. ಕೊನೆಯ ಟೆಸ್ಟ್ಗೆ ಕೌಂಟ್ಡೌನ್ ಶುರುವಾಗಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಾಳೆಯಿಂದ ಮಹತ್ವದ ಫೈಟ್ ಆರಂಭವಾಗಲಿದೆ. ಮೆಲ್ಬರ್ನ್ನಲ್ಲಿ ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ ಸರಣಿಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಇದೀಗ ಸಿಡ್ನಿ ಕದನದಲ್ಲಿ ಕಾಂಗರೂಗಳ ಬೇಟೆಯಾಡಿ ಗೆಲುವಿನ ಟ್ರ್ಯಾಕ್ಗೆ ಮರಳಲು ಪಣತೊಟ್ಟಿದೆ.
ನಾಳಿನ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಅವರ ಅನುಪಸ್ಥಿತಿಯಲ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ತಂಡವನ್ನ ಮುನ್ನಡೆಸಲಿದ್ದಾರೆ.
ರೋಹಿತ್ ಬದಲಿಗೆ ಗಿಲ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ರಿಷಬ್ ಪಂತ್ ಕೂಡ ಪ್ಲೇಯಿಂಗ್ 11ನಲ್ಲಿ ಇರಲ್ಲ ಎಂದು ವರದಿಗಳು ಹೇಳಿವೆ. ಆಕಾಶ್ ದೀಪ್ ಗಾಯದಿಂದ ಅಧಿಕೃತವಾಗಿ ಹೊರ ಬಿದ್ದಿದ್ದಾರೆ.
ವಾಸ್ತವವಾಗಿ ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿಯೂ ರೋಹಿತ್ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಅದಲ್ಲದೆ ಇದೀಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೋಹಿತ್ ಎರಡಂಕಿ ದಾಟಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ರೋಹಿತ್ರನ್ನು ಟೆಸ್ಟ್ ತಂಡದಿಂದ ಕೈಬಿಡುವುದರ ಜೊತೆಗೆ ನಾಯಕತ್ವದಿಂದಲೂ ಕೆಳಗಿಳಿಸಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಇದೀಗ ವರದಿಯಾಗಿರುವಂತೆ ರೋಹಿತ್ರನ್ನು ಕೊನೆಯ ಟೆಸ್ಟ್ನಿಂದ ಹೊರಗಿಡಲಾಗಿದೆ. ಇದರ ಜೊತೆಗೆ ರೋಹಿತ್ ಅವರ ಟೆಸ್ಟ್ ವೃತ್ತಿಜೀವನ ಭಾಗಶಃ ಅಂತ್ಯವಾಗಿದೆ ಎಂತಲೇ ಹೇಳಲಾಗುತ್ತಿದೆ.