ಶಬರಿಮಲೆಗೆ ರೋಪ್‌ವೇ: ಪಂಪಾದಿಂದ ಅಯ್ಯಪ್ಪ ಸನ್ನಿಧಾನದವರೆಗಿನ ಸರ್ವೇ ಕಾರ್ಯ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶಬರಿಮಲೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ ರೋಪ್ ವೇ ಸೌಲಭ್ಯಕ್ಕಾಗಿ ಪಂಪಾದಿಂದ ಸನ್ನಿಧಾನದವರೆಗಿನ ಸರ್ವೇ ಕಾರ್ಯ ಆರಂಭವಾಗಿದೆ.

ಒಟ್ಟು 80 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸಮೀಕ್ಷೆಗಳು ಕೂಡಾ ನಡೆದಿದೆ. ಈ ನಡುವೆ ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನೀಡಿರುವ ಪ್ರಸ್ತಾವನೆ ಪರಿಗಣಿಸಿ ರೋಪ್ ವೇ ಎತ್ತರವನ್ನು 35 ಮೀಟರ್‌ನಿಂದ 60 ಮೀಟರ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಇದರಿಂದ ಕಡಿಯಬೇಕಾದ ಮರಗಳ ಸಂಖ್ಯೆ 510ರಿಂದ 50ಕ್ಕೆ ಇಳಿಯಲಿದೆ. ಪರಿಷ್ಕೃತ ಯೋಜನೆ ಪ್ರಕಾರ ಕಂಬಗಳ ಸಂಖ್ಯೆಯೂ 5ಕ್ಕೆ ಇಳಿಯಲಿದೆ. ಇನ್ನು ನಿಲ್ದಾಣ, ಕಚೇರಿ ನಿರ್ಮಾಣಕ್ಕಾಗಿ ಕಾಲು ಎಕರೆ ಭೂಮಿ ಅಗತ್ಯವಿದ್ದು, ಈ ಪೈಕಿ ದೇವಸ್ವಂ ಬೋರ್ಡ್ 20 ಸೆಂಟ್ಸ್ ಸ್ಥಳ ನೀಡುತ್ತಿದೆ.

ಹೈಕೋರ್ಟ್ ಸೂಚನೆ ಮೇರೆಗೆ ಅಡ್ವೊಕೇಟ್ ಕಮಿಷನ್ ಎಸ್‌ಪಿ ಕುರುಪ್ ಪಸ್ಥಿತಿಯಲ್ಲಿ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದ್ದು, ಸಮೀಕ್ಷಾ ಉಪನಿರ್ದೇಶಕ ಡಿ. ಮೋಹನ್ ದೇವ್, ಅರಣ್ಯ ಸರ್ವೇಕ್ಷಣಾ ತಂಡದ ಅಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಮಲಿಕಪ್ಪುರಂ ಪೊಲೀಸ್ ಬ್ಯಾರಕ್ ಹಿಂಭಾಗದಿಂದ ಈಗ ಸರ್ವೆ ಆರಂಭವಾಗಿದೆ. ಈ ಬಗೆಗಿನ ವರದಿಯನ್ನು ಇದೇ ಮೇ 23ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!