ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಹಳೆಯ ಬೆಕ್ಕು ‘ರೋಸಿ’ ಮೃತಪಟ್ಟಿದೆ .
ಈ ಕುರಿತು ಮಾಲೀಕ ಲೀಲಾ ಬ್ರಿಸೆಟ್ ಮಾಹಿತಿ ನೀಡಿದ್ದು, ರೋಸಿ ಬೆಕ್ಕು ತನ್ನ 33ನೇ ವಯಸ್ಸಿನಲ್ಲಿ ನಾರ್ವಿಚ್ ಯುಕೆಯಲ್ಲಿರುವ ಮನೆಯಲ್ಲಿ ಸಾವನ್ನಪ್ಪಿದೆ.
1991ರಲ್ಲಿ ಜನಿಸಿದ ರೋಸಿ ವಿಶ್ವದ ಅತ್ಯಂತ ಹಳೆಯ ಬೆಕ್ಕು ಎಂಬ ಪಟ್ಟವನ್ನು ಅನಧಿಕೃತವಾಗಿ ಹೊಂದಿತ್ತು. ಅಧಿಕೃತ ದಾಖಲೆಯನ್ನು ಕೆಂಟ್‌ನ 28 ವರ್ಷದ ಫ್ಲೋಸಿ ಹೊಂದಿದೆ. ರೋಸಿ ಜೂನ್ 1 ರಂದು ತನ್ನ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು.
‘ನಾನು ರೋಸಿಯನ್ನು ಬಹಳ ಮಿಸ್ ಮಾಡಿಕೊಳ್ಳುವೆ. ಅವಳಿಗೆ ಹುಷಾರಿರಲಿಲ್ಲ, ಮನೆಯಲ್ಲಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮಲಗಿದಳು. ಅಲ್ಲೆ ಪ್ರಾಣ ಬಿಟ್ಟಿದ್ದಾಳೆ. ನಾವಿಬ್ಬರು ಒಳ್ಳೆಯ ಸಮಯವನ್ನು ಒಟ್ಟಿಗೆ ಕಳೆದಿದ್ದೇವೆ. ಸಾಕಷ್ಟು ನೆನಪುಗಳಿವೆ ಎಂದು ರೋಸಿಯನ್ನು ಸಾಕುತ್ತಿದ್ದ ಲೀಲಾ ಬ್ರಿಸೆಟ್ ಹೇಳಿದ್ದಾರೆ.
ರೋಸಿ ತನ್ನ ಇಳಿವಯಸ್ಸಿನಲ್ಲಿ ಹೊರಹೋಗುವುದನ್ನು ನಿಲ್ಲಿಸಿದ ಬಳಿಕ ಕಿಟಕಿಯ ಬಳಿಯೇ ಇರುತ್ತಿದ್ದಳು. ಅಸಲಿಗೆ ರೋಸಿ ಬೇರೊಂದು ಕುಟುಂಬದಲ್ಲಿ ಬೆಳೆಯಬೇಕಿತ್ತು. ಆದರೆ ಆ ಮನೆಯಲ್ಲಿನ ಮಗುವಿಗೆ ಅಲರ್ಜಿ ಆಗುವುದನ್ನು ಅರಿತು ಅವರು ರೋಸಿಯನ್ನು ಬಿಟ್ಟುಹೋದರು. ರೋಸಿಗೆ ಅಲಾರ್ಮ್ ಅಗತ್ಯವಿರಲಿಲ್ಲ. ಅವಳು ಕೊನೆದಿನಗಳಲ್ಲೂ ಸರಿಯಾದ ಸಮಯಕ್ಕೆ ತಿನ್ನುವುದು, ಮಲಗುವುದು ಹಾಗೂ ಟ್ರೇ ಬಳಸುವುದನ್ನು ಸ್ವತಃ ಮಾಡುತ್ತಿದ್ದಳೂ. ಅವಳು ಮಲಗಿದಾಗೆಲ್ಲ ನಾನು ರೋಸಿ ಜೀವಂತವಾಗಿದ್ದಾಳೆಯೇ, ಉಸಿರಾಡುತ್ತಿದ್ದಾಳೆಯೇ ಎಂದು ಪರಿಶೀಲಿಸುತ್ತಿದೆ ಎಂದು ಅವರು ರೋಸಿಯನ್ನು ನೆನಪಿಸಿಕೊಂಡಿದ್ದಾರೆ.
ನಾನು ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಾಗ ರೋಸಿಯನ್ನು ಪಡೆದುಕೊಂಡೆ. ಅವಳು ತಿನ್ನುವುದನ್ನು ಇಷ್ಟಪಡುತ್ತಾಳೆ ಮತ್ತು ನಿದ್ದೆ ಮಾಡುತ್ತಾಳೆ. ಊಟದ ಸಮಯದಲ್ಲಿ ಎಚ್ಚರಗೊಂಡು ಉಳಿದದ್ದನ್ನು ತಿನ್ನುತ್ತಾಳೆ ಎಂದು ನಾನು ಭಾವಿಸುತ್ತೇನೆ. ಆದರೆ ಮಧ್ಯಾಹ್ನದ ಊಟದ ವೇಳೆಗೆ ಏನೂ ಉಳಿದಿರುವುದಿಲ್ಲ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ರೋಸಿ ಬಗ್ಗೆ ಬ್ರಿಸೆಟ್ ಹೇಳಿದ್ದರು. ಟೆಕ್ಸಾಸ್‌ನ ಆಸ್ಟಿನ್‌ನ ಕ್ರೀಮ್ ಪಫ್ ಇದುವರೆಗೆ ಬದುಕಿದ್ದ ಅತ್ಯಂತ ಹಳೆಯ ಬೆಕ್ಕು ಎಂಬ ದಾಖಲೆಯನ್ನು ಹೊಂದಿದೆ. 1967 ಆಗಸ್ಟ್ 3ರಂದು ಜನಿಸಿದ ಕ್ರೀಮ್ ಪಫ್ 2005 ಆಗಸ್ಟ್ 6ರವರೆಗೆ 38 ವರ್ಷ ಮತ್ತು 3 ದಿನಗಳವರೆಗೆ ಬದುಕುಳಿದಿತ್ತು.