ಹೊಸದಿಗಂತ ಬೆಳಗಾವಿ:
ಬೆಳಗಾವಿಯ ನ್ಯಾಯಾಲಯದ ಆವರಣದಲ್ಲಿ ರೌಡಿಶೀಟರ್‌ಗಳ ಪುಂಡಾಟಿಕೆ ಮಿತಿಮೀರಿದ್ದು, ಪೊಲೀಸರ ಸಮ್ಮುಖದಲ್ಲೇ ಕರ್ತವ್ಯ ನಿರತ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ನಡೆದಿದೆ. ರೌಡಿಶೀಟರ್ ಲಕ್ಷ್ಮಣ ದಡ್ಡಿ ಮತ್ತು ಆತನ ತಂಡ ಪತ್ರಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ರಾಕ್ಷಸೀ ಪ್ರವೃತ್ತಿ ಮೆರೆದಿದೆ.
ಶಹಬಾಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ರೌಡಿಶೀಟರ್‌ಗಳಾದ ಲಕ್ಷ್ಮಣ ದಡ್ಡಿ, ಸವೀನ ದಡ್ಡಿ, ಬಸವರಾಜ ದಡ್ಡಿ ಮತ್ತು ಬಸವಣ್ಣಿ ನಾಯಕ ಅವರನ್ನು ಎರಡನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ಮುಗಿಸಿ ಪೊಲೀಸರು ಇವರನ್ನು ಮರಳಿ ಹಿಂಡಲಗಾ ಜೈಲಿಗೆ ಕರೆದೊಯ್ಯುವ ವೇಳೆ, ಅಲ್ಲಿ ವರದಿಗಾಗಿ ಉಪಸ್ಥಿತರಿದ್ದ ಮಾಧ್ಯಮದ ಕ್ಯಾಮರಾಮನ್‌ಗಳು ವಿಡಿಯೋ ಚಿತ್ರೀಕರಿಸುತ್ತಿದ್ದರು. ಇದನ್ನು ಕಂಡು ಕೆರಳಿದ ಆರೋಪಿಗಳು ಏಕಾಏಕಿ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿ, ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ.
ವಿಶೇಷವೆಂದರೆ, ಪೊಲೀಸ್ ಬಿಗಿ ಭದ್ರತೆಯ ನಡುವೆಯೇ ಈ ಘಟನೆ ನಡೆದಿದ್ದು, ರೌಡಿಗಳು ಕಿಂಚಿತ್ತೂ ಕಾನೂನಿನ ಭಯವಿಲ್ಲದಂತೆ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಾಧ್ಯಮದವರ ಮೇಲಿನ ಈ ಹಲ್ಲೆಯನ್ನು ಖಂಡಿಸಿ ಬೆಳಗಾವಿಯ ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.



