ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶಾದ್ಯಂತ ನಡೆದ 18ನೇ ರೋಜ್‌ಗಾರ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 61,000 ಕ್ಕೂ ಹೆಚ್ಚು ನವ ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ನೇಮಕಾತಿ ಪತ್ರಗಳು ಕೇವಲ ಉದ್ಯೋಗದ ದಾಖಲೆಗಳಲ್ಲ, ಬದಲಿಗೆ ರಾಷ್ಟ್ರ ನಿರ್ಮಾಣಕ್ಕಾಗಿ ನೀಡಲಾದ ಆಹ್ವಾನ ಪತ್ರಿಕೆಗಳು ಎಂದು ಬಣ್ಣಿಸಿದರು.
ಈ ನೇಮಕಾತಿ ಪತ್ರಗಳು ಭಾರತವನ್ನು ಜಗತ್ತಿನ ಹೊಸ ಎತ್ತರಕ್ಕೆ ಕೊಂಡೊಯ್ಯುವ ‘ಸಂಕಲ್ಪ ಪತ್ರ’ಗಳಾಗಿವೆ ಎಂದು ಪ್ರಧಾನಿ ತಿಳಿಸಿದರು. ತಮ್ಮ ಕರ್ತವ್ಯದ ಮೂಲಕ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಅವರು ಹೊಸ ನೇಮಕಾತಿದಾರರಿಗೆ ಕರೆ ನೀಡಿದರು.
ಆರೋಗ್ಯ, ಶಿಕ್ಷಣ ಮತ್ತು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಈ ಯುವಪಡೆಯ ಪಾತ್ರ ಮಹತ್ವದ್ದು ಎಂದು ಮೋದಿ ಆಶಯ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಐಪಿಎಸ್, ಸಿಆರ್‌ಪಿಎಫ್ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.



