ಹೊಸದಿಗಂತ ವರದಿ ಅಂಕೋಲ:
ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ 1.15 ಕೋಟಿ ರೂ. ಹಣ ಪತ್ತೆಯಾಗಿದ್ದು ಇದರ ಮೂಲ ಇನ್ನೂ ನಿಗೂಢವಾಗಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದ್ದು ತನಿಖೆ ಭರದಿಂದ ಸಾಗಿದೆ. ಈ ಕಾರನ್ನು ಇಲ್ಲಿ ಬಿಟ್ಟು ಹೋದವರ್ಯಾರು ಮತ್ತು ಹಣ ಎಲ್ಲಿಯದು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.
ಕೆಎ 51 ಎಮ್.ಬಿ 9634 ನಂಬರ್ ಪ್ಲೇಟಿನ ಅನುಮಾನಾಸ್ಪದ ಕಾರೊಂದು ಮಂಗಳವಾರ ಬೆಳಿಗ್ಗೆ ವಿಚಿತ್ರ ಸ್ಥಿತಿಯಲ್ಲಿ ಕಂಡುಬಂದಿತ್ತು. ಕಾರಿನ ರಿಜಿಸ್ಟ್ರೇಷನ್ ನಂಬರ್ ನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸುತ್ತಿದ್ದು ಮಡಿಕೇರಿ ಆರ್.ಟಿ.ಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಈ ಕಾರಿನ ಬಾನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಕಾರಿನ ಚಾಲಕನ ಸೀಟು ಮತ್ತು ಹಿಂದಿನ ಸೀಟಿನ ಕೆಳಗಡೆ ಕಬ್ಬಿಣದ ಬಾಕ್ಸ್ ಮಾಡಲಾಗಿದ್ದು ಇದರಲ್ಲಿ ಹಣ ಇತ್ತು.
ದಾಖಲೆ ಇಲ್ಲದ ಹಣ ಸಾಗಿಸುವ ಜಾಲ ಇದರ ಹಿಂದಿತ್ತೇ ಎನ್ನುವುದು ಬಹಿರಂಗವಾಗಬೇಕು. ಇಷ್ಟು ಹಣ ಕದ್ದ ಬಗ್ಗೆ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿರುವ ಮಾಹಿತಿ ಇಲ್ಲ. ಹೀಗಾಗಿ ಹಣದ ಮೂಲ ಪತ್ತೆಗೆ ತೊಡಕಾಗಿದೆ.