ವೈಶ್ವಿಕ ವೇದಿಕೆಯಲ್ಲಿ ಭಾರತದ ಮಹತ್ವ ಸಾರಿದೆ G20- ಮೋಹನ್ ಭಾಗವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಭಾರತವು ಇಂದು ವಿಶ್ವ ಮಟ್ಟದಲ್ಲಿ ಭಾರತದ ಮಹತ್ವವನ್ನು ಸಾರಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.

ವಿಜಯದಶಮಿ ಪ್ರಯುಕ್ತ ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶವು ಜಿ-20 ಹೆಸರಿನಲ್ಲಿ ಸೇರುವ ಪ್ರಮುಖ ದೇಶಗಳ ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿತ್ತು. ವರ್ಷವಿಡೀ ಸದಸ್ಯ ರಾಷ್ಟ್ರಗಳ ರಾಷ್ಟ್ರ ಪ್ರಮುಖರು, ಮಂತ್ರಿಗಳು, ಶಾಸಕರು ಮತ್ತು ಚಿಂತಕರೊಡನೆ ಅನೇಕ ಕಾರ್ಯಕ್ರಮಗಳು ಭಾರತದ ಅನೇಕ ಸ್ಥಳಗಳಲ್ಲಿ ನಡೆಯಿತು. ಭಾರತೀಯರ ಆತ್ಮೀಯ ಆತಿಥ್ಯದ ಅನುಭವ, ಭಾರತದ ಗೌರವಶಾಲಿ ಇತಿಹಾಸ ಮತ್ತು ವರ್ತಮಾನದ ಉತ್ಸಾಹಭರಿತ ಅಭ್ಯುದಯವು ಎಲ್ಲಾ ಸಹಭಾಗಿಗಳನ್ನೂ ಪ್ರಭಾವಿತರನ್ನಾಗಿಸಿತು. ಆಫ್ರಿಕನ್ ಯೂನಿಯನ್ ಅನ್ನು ಸದಸ್ಯ ರಾಷ್ಟ್ರವನ್ನಾಗಿ ಸ್ವೀಕರಿಸುವಂತೆ ಹಾಗೂ ಶೃಂಗಸಭೆಯ ಮೊದಲನೆಯ ದಿನವೇ ಘೋಷಣಾ ಪ್ರಸ್ತಾವಕ್ಕೆ ಸರ್ವರ ಅನುಮೋದನೆಯನ್ನು ಪಡೆಯುವಲ್ಲಿ ಭಾರತದ ಪ್ರಾಮಾಣಿಕ ಸದ್ಭಾವನೆ ಮತ್ತು ರಾಜನೈತಿಕ ಕೌಶಲ್ಯವು ಎಲ್ಲರ ಗಮನ ಸೆಳೆಯಿತು. ವಿಶ್ವದ ಚಿಂತನೆಯಲ್ಲಿ ‘ವಸುಧೈವ ಕುಟುಂಬಕಂ’ ಎಂಬ ದಿಶೆಯು ಇಲ್ಲಿ ಸಾಕ್ಷಿಯಾಯಿತು ಎಂದರು.

ಕ್ರೀಡಾಪಟುಗಳಿಗೆ ಅಭಿನಂದನೆ

ಈ ಬಾರಿ ನಮ್ಮ ದೇಶದ ಕ್ರೀಡಾಪಟುಗಳು ಏಷ್ಯನ್‌ ಗೇಮ್ಸ್‌ನ್ಲಲಿ ಹೆಚ್ಚು ಪದಕ ಗೆದ್ದಿದ್ದು, ಮೊದಲ ಬಾರಿಗೆ 100ಕ್ಕೂ ಅಧಿಕ ಅಂದರೆ ಒಟ್ಟು 107 ಪದಕ (28 ಸ್ವರ್ಣ, 38 ಬೆಳ್ಳಿ ಮತ್ತು 41 ಕಂಚು) ಗಳನ್ನು ಗೆದ್ದು ನಮ್ಮೆಲ್ಲರ ಉತ್ಸಾಹವನ್ನು ಹೆಚ್ಚಿಸಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಇತಿಹಾಸ ಬರೆದ ಚಂದ್ರಯಾನ

ಭಾರತದ ಶಕ್ತಿ, ಬುದ್ಧಿ ಹಾಗೂ ಯುಕ್ತಿಯ ಮಿಂಚುನೋಟವನ್ನು ಚಂದ್ರಯಾನದ ಸಂದರ್ಭದಲ್ಲೂ ವಿಶ್ವವೇ ನೋಡಿದೆ. ಅಂತರಿಕ್ಷದ ಯುಗದ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ವಿಕ್ರಂ ಲ್ಯಾಂಡರ್ ಇಳಿಯಿತು. ಎಲ್ಲ ಭಾರತೀಯರ ಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ವಿಜ್ಞಾನಿಗಳಿಗೆ ಮತ್ತು ಅವರಿಗೆ ಶಕ್ತಿ ತುಂಬಿದ ಇಡೀ ದೇಶಕ್ಕೆ ಅಭಿನಂದನೆ ಎಂದರು.

ಜ.22ಕ್ಕೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ

ಜನವರಿ 22ರಂದು ಮಂದಿರದ ಗರ್ಭಗೃಹದಲ್ಲಿರುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಲಿದೆ ಎಂದು ಘೋಷಣೆಯಾಗಿದೆ. ವ್ಯವಸ್ಥೆಯಲ್ಲಿರುವ ಕಷ್ಟಗಳು ಮತ್ತು ಸುರಕ್ಷತೆ ಕುರಿತು ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಪಾವನ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸೀಮಿತ ಸಂಖ್ಯೆಯ ಜನರಷ್ಟೇ ಉಪಸ್ಥಿತರಿರಲು ಸಾಧ್ಯ ಎಂದು ಹೇಳಿದರು.

ಪ್ರಕೃತಿಗೆ ವಿರುದ್ಧವಾದ ನಡೆ

ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥ ಮತ್ತು ನಿಯಂತ್ರಣವಿಲ್ಲದ ಉಪಭೋಗದ ಕಾರಣದಿಂದ ಹೊಸ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ. ವಿಕೃತಿಗಳು ಮತ್ತು ಅಪರಾಧಗಳು ಹೆಚ್ಚುತ್ತಿವೆ. ಮಿತಿಯಿಲ್ಲದ ವ್ಯಕ್ತಿವಾದದ ಕಾರಣದಿಂದ ಕುಟುಂಬಗಳು ಛಿದ್ರಗೊಳ್ಳುತ್ತಿವೆ. ಪ್ರಕೃತಿಯ ಮಿತಿಮೀರಿದ ಶೋಷಣೆಯಿಂದ ಮಾಲಿನ್ಯ, ಜಾಗತಿಕ ತಾಪಮಾನದಲ್ಲಿ ಏರಿಕೆ, ಋತುಗಳ ವ್ಯವಸ್ಥೆಯಲ್ಲಿ ಅಸಂತುಲನ ಮತ್ತು ಅದರ ಫಲವಾಗಿ ಹುಟ್ಟುವ ನೈಸರ್ಗಿಕ ದುರಂತಗಳೂವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಹೀಗಾಗಿ ನಮ್ಮ ಸನಾತನ ಮೌಲ್ಯಗಳ ಮತ್ತು ಸಂಸ್ಕಾರಗಳ ಆಧಾರದ ಮೇಲೆ, ಭಾರತವು ತನ್ನ ಉದಾಹರಣೆಯ ಮೂಲಕ ಜಗತ್ತಿಗೆ ವಾಸ್ತವಿಕ ಸುಖ, ಶಾಂತಿಯ ಹೊಸಮಾರ್ಗವನ್ನು ತೋರಿಸಬೇಕಾದ ಅಪೇಕ್ಷೆ ಎದುರಾಗಿದೆ ಎಂದರು.

ದೇಶದ ಗಡಿ ರಕ್ಷಣೆ

ದೇಶದ ಗಡಿಗಳ ಸುರಕ್ಷೆ, ಜಲ ಸುರಕ್ಷೆ ಮತ್ತು ಪರಿಸರದ ಸ್ವಾಸ್ಥ್ಯಗಳ ದೃಷ್ಟಿಯಿಂದ ಭಾರತದ ಉತ್ತರ ಭಾಗದ ಗಡಿಗಳನ್ನು ನಿರ್ಣಯಿಸುವ ಈ ಪ್ರದೇಶಗಳು ಅತ್ಯಂತ ಮಹತ್ವಪೂರ್ಣವಾಗಿವೆ.‌ ಯಾವುದೇ ಬೆಲೆ ತೆತ್ತಾದರೂ ಇವುಗಳನ್ನು ರಕ್ಷಿಸಿಕೊಳ್ಳಲೇಬೇಕಿದೆ. ಸುರಕ್ಷೆ, ಪರಿಸರ, ಜನಸಂಖ್ಯೆ ಮತ್ತು ವಿಕಾಸದ ದೃಷ್ಟಿಯಿಂದ ಈ ಇಡೀ ಪ್ರದೇಶವನ್ನು ಒಂದು ಘಟಕ ಎಂದು ಪರಿಗಣಿಸಿ ಹಿಮಾಲಯ ಪ್ರದೇಶದ ಕುರಿತು ಯೋಚಿಸಬೇಕಾಗುತ್ತದೆ ಎಂದು ತಿಳಿಸಿದರು.

ಸ್ವಾರ್ಥ ಕಾರಣಕ್ಕಾಗಿ ರಾಜಕೀಯ ಮೈತ್ರಿ

ದೇಶದಲ್ಲಿ ಸ್ವಾರ್ಥದ ಕಾರಣಕ್ಕಾಗಿ ರಾಜಕೀಯ ಪ್ರತಿಸ್ಪರ್ಧಿಯನ್ನು ಸೋಲಿಸಲು ಇಂತಹ ಅನಪೇಕ್ಷಿತ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅವಿವೇಕದ ಕೆಲಸ. ಸಮಾಜವು ಈಗಾಗಲೇ ಆತ್ಮವಿಸ್ಮೃತಿಗೊಂಡು, ಅನೇಕ ಪ್ರಕಾರದ ಭೇದಗಳಿಂದ ಜರ್ಜರಿತಗೊಂಡು ಸ್ವಾರ್ಥ, ಸ್ವಹಿತಾಸಕ್ತಿ, ಅಸೂಯೆ ಮತ್ತು ದ್ವೇಷದ ಘಾತಕ ಸ್ಪರ್ಧೆಯಲ್ಲಿ ಸಿಲುಕಿಕೊಂಡಿದೆ. ಅದಕ್ಕಾಗಿಯೇ ಈ ಆಸುರೀ ಶಕ್ತಿಗಳಿಗೆ ಸಮಾಜ ಅಥವಾ ರಾಷ್ಟ್ರವನ್ನು ಒಡೆಯಲು ಬಯಸುವ ಆಂತರಿಕ ಅಥವಾ ಬಾಹ್ಯ ಶಕ್ತಿಗಳ ಬೆಂಬಲವೂ ಸಿಗುತ್ತದೆ ಎಂದರು.

ಶಾಂತಿಯುತ ಮಣಿಪುರದಲ್ಲಿ ವೈಷಮ್ಯ ಹುಟ್ಟಿದ್ದು ಹೇಗೆ ?

ಸುಮಾರು ಒಂದು ದಶಕದಿಂದ ಶಾಂತಿಯುತವಾಗಿದ್ದ ಮಣಿಪುರದಲ್ಲಿ ಈ ಪರಸ್ಪರ ವೈಷಮ್ಯ ಏಕಾಏಕಿ ಹೇಗೆ ಭುಗಿಲೆದ್ದಿತು? ಹಿಂಸಾಚಾರ ನಡೆಸಿದವರಲ್ಲಿ ಗಡಿಯಾಚೆಗಿನ ಉಗ್ರರೂ ಇದ್ದಾರೆಯೇ? ತಮ್ಮ ಅಸ್ತಿತ್ವದ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದ ಮಣಿಪುರಿ ಮೈತೇಯಿ ಸಮುದಾಯ ಮತ್ತು ಕುಕಿ ಸಮುದಾಯದ ನಡುವಿನ ಈ ಪರಸ್ಪರ ಸಂಘರ್ಷಕ್ಕೆ ಕೋಮು ಸ್ವರೂಪವನ್ನು ನೀಡುವ ಪ್ರಯತ್ನ ಏಕೆ ಮತ್ತು ಯಾರಿಂದ ನಡೆಯಿತು? ವರ್ಷಾನುಗಟ್ಟಲೆ ಎಲ್ಲರಿಗೂ ಸಮಾನ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ಸಂಘದಂತಹ ಸಂಸ್ಥೆಯನ್ನು ವಿನಾಕಾರಣ ಇದಕ್ಕೆ ಎಳೆದು ತರುವ ಪಟ್ಟಭದ್ರ ಹಿತಾಸಕ್ತಿ ಯಾರಿಗಿದೆ? ಈ ಗಡಿ ಪ್ರದೇಶದಲ್ಲಿ ನಾಗಾಭೂಮಿ ಮತ್ತು ಮಿಜೋರಾಂ ನಡುವೆ ಇರುವ ಮಣಿಪುರದಲ್ಲಿ ಇಂತಹ ಅಶಾಂತಿ ಮತ್ತು ಅಸ್ಥಿರತೆಯ ಲಾಭ ಪಡೆಯಲು ಯಾವ ವಿದೇಶಿ ಶಕ್ತಿಗಳು ಆಸಕ್ತಿ ಹೊಂದಿರಬಹುದು? ಪರಂಪರಾಗತ ಆಗ್ನೇಯ ಏಷ್ಯಾದ ಭೌಗೋಳಿಕ ರಾಜಕೀಯವು ಈ ಘಟನೆಗಳಲ್ಲಿ ಯಾವುದೇ ಪಾತ್ರವನ್ನು ಹೊಂದಿದೆಯೇ? ದೇಶದಲ್ಲಿ ಬಲಿಷ್ಠ ಸರಕಾರವಿದ್ದರೂ ಯಾರ ಬಲದ ಮೇಲೆ ಇಷ್ಟು ದಿನ ಈ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ? ಕಳೆದ 9 ವರ್ಷಗಳಿಂದ ನಡೆಯುತ್ತಿದ್ದ ಶಾಂತಿಯನ್ನು ಕಾಪಾಡುವ ರಾಜ್ಯ ಸರಕಾರವಿದ್ದರೂ ಈ ಹಿಂಸಾಚಾರ ಭುಗಿಲೆದ್ದಿದ್ದು ಮತ್ತು ಮುಂದುವರಿದದ್ದು ಏಕೆ ಎಂದು ಪ್ರಶ್ನಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಸಂಘರ್ಷದಲ್ಲಿ ತೊಡಗಿದ್ದ ಎರಡೂ ಕಡೆಯ ಜನರು ಶಾಂತಿಯನ್ನು ಬಯಸುತ್ತಿರುವಾಗ, ಆ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಹೆಜ್ಜೆ ಇಡುತ್ತಿರುವುದನ್ನು ಕಂಡ ತಕ್ಷಣ ಷಡ್ಯಂತ್ರ ರಚಿಸುವ ಮೂಲಕ ಮತ್ತೆ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಶಕ್ತಿಗಳು ಯಾವುವು? ಈ ಸಮಸ್ಯೆಯ ಪರಿಹಾರಕ್ಕಾಗಿ ಬಹು ಆಯಾಮದ ಪ್ರಯತ್ನಗಳ‌ ಆವಶ್ಯಕತೆಯಿರುತ್ತವೆ. ಇದಕ್ಕಾಗಿ, ರಾಜಕೀಯ ಇಚ್ಛಾಶಕ್ತಿ, ಅದಕ್ಕನುಗುಣವಾದ ಕ್ರಿಯಾಶೀಲತೆ ಮತ್ತು ದಕ್ಷತೆ ಈಗ ಅಗ್ಯವಿದೆ ಎಂದು ನುಡಿದರು.

ಏಕತೆಯ ಮನಸ್ಥಿತಿಯೊಂದಿಗೆ ಮುನ್ನಡೆಯುವುದು ಅಗತ್ಯ

ಇಂದಿನ ದಿನಗಳಲ್ಲಿ ಸಮಾಜದಲ್ಲಿ ಕಲಹ ಹರಡಲು ನಡೆಯುತ್ತಿರುವ ಪ್ರಯತ್ನಗಳನ್ನು ಕಂಡು ಸಹಜವಾಗಿಯೇ ಹಲವರು ಚಿಂತಿತರಾಗಿದ್ದಾರೆ ಮತ್ತು ಅಂತಹವರು ಸಿಗುತ್ತಿರುತ್ತಾರೆ. ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವ ಸಜ್ಜನರನ್ನು ಕೂಡ ನಾವು ಕಾಣುತ್ತೇವೆ, ಅವರ ಪೂಜೆಯಿಂದಾಗಿ ಮುಸಲ್ಮಾನ ಅಥವಾ ಕ್ರಿಶ್ಚಿಯನ್ ಎಂದು ಕರೆಯಲ್ಪಡುವ ಜನರು ಸಹ ಕಂಡುಬರುತ್ತಾರೆ. ಅವರು‌ ಹೇಳುವುದೇನೆಂದರೆ ಫಿತ್ನಾ (ಅಪಶ್ರುತಿ), ಫಸಾದ್ (ಕಲಹ)ಹಾಗೂ ಕಿತಾನ್ (ಹಿಂಸೆ) ಇವುಗಳನ್ನು ಬಿಟ್ಟು ಸುಲಾಹ್ (ಸಮನ್ವಯ), ಸಲಾಮತಿ (ಸುರಕ್ಷತೆ) ಮತ್ತು ಅಮನ್ (ಶಾಂತಿ) ಇವುಗಳನ್ನು ಅನುಸರಿಸುವುದೇ ಶ್ರೇಷ್ಠ ಎನ್ನುತ್ತಾರೆ. ಈ ಚರ್ಚೆಗಳಲ್ಲಿ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ಕಾಕತಾಳೀಯವಾಗಿ ಒಂದು ನೆಲದಲ್ಲಿ ವಿಭಿನ್ನ ಸಮುದಾಯಗಳು ಆಕಸ್ಮಿಕವಾಗಿ ಒಂದಾಗುವ ಮಾತಲ್ಲ ಇದು. ನಾವು ಸಮಾನ ಪೂರ್ವಜರ ವಂಶಸ್ಥರು, ಒಂದೇ ಮಾತೃಭೂಮಿಯ ಮಕ್ಕಳು, ಒಂದು ಸಂಸ್ಕೃತಿಯ ವಾರಸುದಾರರು, ನಮ್ಮ ಪರಸ್ಪರ ಏಕತೆಯನ್ನು ಮರೆತಿದ್ದೇವೆ. ನಾವು ನಮ್ಮ ಆ ಮೂಲ ಏಕತೆಯನ್ನು ಅರ್ಥಮಾಡಿಕೊಂಡು ಅದರ ಆಧಾರದಲ್ಲಿ ಮತ್ತೆ ಒಂದಾಗಬೇಕು. ಸಮಸ್ಯೆಗಳಿವೆ ನಿಜ ಆದರೆ ಅವು ಕೇವಲ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ. ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದ ಜೊತೆಗೆ, ನಾವು ಅನ್ಯೋನ್ಯತೆ ಮತ್ತು ಏಕತೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬರು ಇನ್ನೊಬ್ಬರನ್ನು ಅವಿಶ್ವಾಸದ ದೃಷ್ಟಿಯಿಂದ ನೋಡುವ ಅಥವಾ ರಾಜಕೀಯ ಪ್ರಭಾವದ ತೊಡಕುಗಳನ್ನು ಪಕ್ಕಕ್ಕಿರಿಸಿ ಮುನ್ನಡೆಯಬೇಕಿದೆ ಎಂದರು.

ನಮ್ಮನ್ನು ಪರಸ್ಪರ ಹೋರಾಡುವಂತೆ ಮಾಡಿ ದೇಶ ಒಡೆಯಲು ಬಯಸುವ ಶಕ್ತಿಗಳು ಇದರ ಸಂಪೂರ್ಣ ಲಾಭವನ್ನೂ ಪಡೆಯುತ್ತವೆ. ಹಿಂಸಾಚಾರವನ್ನು ಪ್ರಚೋದಿಸುವ “ಟೂಲ್ ಕಿಟ್‌ಗಳು” ಸಕ್ರಿಯವಾಗುತ್ತವೆ ಮತ್ತು ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಮತ್ತಷ್ಟು ಹೆಚ್ಚಿಸುವ ಕೆಲಸಗಳು ನಡೆಯುತ್ತವೆ. ಸಮಾಜದಲ್ಲಿ ಸಾಮರಸ್ಯ ಬಯಸುವವರೆಲ್ಲ ಈ ಘಾತುಕ ಆಟಗಳ ಮಾಯೆಯಿಂದ ಪಾರಾಗಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವು ಕ್ರಮೇಣವಾಗಿ ಹೊರಹೊಮ್ಮುತ್ತದೆ. ಅದಕ್ಕಾಗಿ, ದೇಶದಲ್ಲಿ ವಿಶ್ವಾಸ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ಸತ್ಯ ಮತ್ತು ಆತ್ಮೀಯತೆ ಹರಡಲು ಮಾಧ್ಯಗಳ ಬಳಕೆ

ಯಾವುದೇ ಸಂದರ್ಭದಲ್ಲೂ, ಎಷ್ಟೇ ಪ್ರಚೋದನೆ ಇದ್ದರೂ, ಕಾನೂನು ಸುವ್ಯವಸ್ಥೆ, ನಾಗರಿಕ ಅನುಶಾಸನ‌ ಹಾಗೂ ಸಂವಿಧಾನ ಪಾಲಿಸುವುದು ಕಡ್ಡಾಯ. ಸ್ವತಂತ್ರ ದೇಶದಲ್ಲಿ ಈ ನಡವಳಿಕೆಯನ್ನು ದೇಶಭಕ್ತಿಯ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಮಾಧ್ಯಮಗಳನ್ನು ಬಳಸಿಕೊಂಡು ಮಾಡುವ ಪ್ರಚೋದನಕಾರಿ ಅಪಪ್ರಚಾರ ಮತ್ತು ಅದರ ಫಲಸ್ವರೂಪವಾಗಿ ಹುಟ್ಟಿಕೊಳ್ಳುವ ಆರೋಪ-ಪ್ರತ್ಯಾರೋಪಗಳ ಪೈಪೋಟಿಯಲ್ಲಿ ಸಿಲುಕಿಕೊಳ್ಳಬೇಡಿ. ಸಮಾಜದಲ್ಲಿ ಸತ್ಯ ಮತ್ತು ಆತ್ಮೀಯತೆಯನ್ನು ಹರಡಲು ಮಾಧ್ಯಮಗಳನ್ನು ಬಳಸಿ ಎಂದರು.

ಪ್ರಚೋದನೆಗೆ ಒಳಗಾಗದೆ ನಿಮ್ಮ ಮತ ಚಲಾಯಿಸಿ

ಮುಂಬರುವ 2024ರ ಆರಂಭದ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಆಮಿಷಗಳನ್ನು ಒಡ್ಡಿ ಭಾವನೆಗಳನ್ನು ಪ್ರಚೋದಿಸುವ ಮೂಲಕ ಮತಗಳನ್ನು ಕೊಯ್ಲು ಮಾಡುವ ಪ್ರಯತ್ನಗಳನ್ನು ನಡೆಯುತ್ತವೆ. ಆದರೆ ದೇಶದ ಏಕತೆ, ಸಮಗ್ರತೆ, ಅಸ್ಮಿತೆ ಮತ್ತು ಅಭಿವೃದ್ಧಿಯ ವಿಷಯಗಳನ್ನು ಪರಿಗಣಿಸಿ ನಿಮ್ಮ ಮತ ಚಲಾಯಿಸಿ ಎಂದು ಸಲಹೆ ನೀಡಿದರು.

ಸಮಾಜದ ಹಿತದೃಷ್ಟಿಯಿಂದ ಸರ್ಕಾರ, ಆಡಳಿತ ಮತ್ತು ಸಮಾಜದ ಸಜ್ಜನಶಕ್ತಿಗಳು ಯಾವುದೇ ಕಾರ್ಯ ಮಾಡುತ್ತಿರಲಿ ಅಥವಾ ಮಾಡಲು ಬಯಸಿದರೂ ಅದರಲ್ಲಿ ಸಂಘದ ಸ್ವಯಂಸೇವಕರ ಕೊಡುಗೆ ನಿತ್ಯಾನುಸಾರದಂತೆ ಇರಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!