ಅಸ್ಸಾಂ ಬೆಳಗಿಸಿದ ದೀಪೋಕ್ ದಾ: ಬಯೋಗ್ರಫಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಆರ್‌ಎಸ್‌ಎಸ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಗುವಾಹಟಿ: ಇತ್ತೀಚೆಗೆ ನಿಧನರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಮತ್ತು ಅಸ್ಸಾಂನ ಸಮಾಜ ಸೇವಕ ದೀಪೋಕ್ ಕುಮಾರ್ ಬರ್ತಾಕೂರ್ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಇಂದು ಗುವಾಹಟಿಯ ಶ್ರೀಮಂತ್ ಶಂಕರದೇವ್ ಇಂಟರ್‌ನ್ಯಾಶನಲ್ ಆಡಿಟೋರಿಯಂನಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಕೃತಿ ಅನಾವರಣಗೊಳಿಸಿದರು. ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವ ಶರ್ಮಾ, ಸತ್ರಾಧಿಕಾರ್ ಜನಾರ್ದನ ದೇವ್ ಗೋಸ್ವಾಮಿ, ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಅಧ್ಯಕ್ಷ ಎ.ಬಾಲಕೃಷ್ಣ, ಆರ್‌ಎಸ್‌ಎಸ್ ಕ್ಷೇತ್ರ ಸಂಘಚಾಲಕ ಡಾ.ಉಮೇಶ್ ಚಕ್ರವರ್ತಿ, ದೀಪೋಕ್ ಬಾರ್ತಾಕೂರ್ ಅವರ ಪತ್ನಿ ಡಾ. ಇಂದಿರಾ ಬಾರ್ತಾಕೂರ್ ಉಪಸ್ಥಿತರಿದ್ದರು.

ದೀಪೋಕ್ ದಾ ಎಂದೇ ಖ್ಯಾತರಾಗಿದ್ದ ದೀಪೋಕ್ ಕುಮಾರ್ ಬರ್ತಾಕೂರ್ ಅವರು ತಮ್ಮ ಜೀವನದ ಆರು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟವರು. ಅಸ್ಸಾಂನ ಮೊದಲ ಬಿಜೆಪಿ ಸರಕಾರದ ಅವಧಿಯಲ್ಲಿ ಅವರು ರಾಜ್ಯ ನಾವೀನ್ಯತೆ ಮತ್ತು ಪರಿವರ್ತನಾ ಪ್ರಾಧಿಕಾರದ (ಎಸ್‌ಐಟಿಎ) ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 84ರ ಹರೆಯದ ಅವರು ಫೆ. 16ರಂದು ನಿಧನರಾದರು.

ಬಾರ್ತಾಕೂರ್ ಅವರು ವಿವೇಕಾನಂದ ಕೇಂದ್ರ, ಭಾರತ ವಿಕಾಸ ಪರಿಷತ್, ಶಿಶು ಶಿಕ್ಷಾ ಸಮಿತಿ, ನಾಗರಿಕ ಸಮಾಬಾಯಿ ಬ್ಯಾಂಕ್, ಶ್ರೀಶಂಕರದೇವ ನೇತ್ರಾಲಯ ಮತ್ತು ಬಾಲಾಜಿ ದೇವಸ್ಥಾನದಂತಹ ವೈವಿಧ್ಯಮಯ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿದ್ದರು. ಈ ಸಂಸ್ಥೆಗಳೊಂದಿಗಿನ ಅವರ ಒಡನಾಟ ಮತ್ತು ಸಮಾಜದ ಒಳಿತಿಗಾಗಿ ಈ ಸಂಸ್ಥೆಗಳು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೈಗೊಂಡ ಕಾರ್ಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. ಶಿಕ್ಷಣ, ಕಲೆ ಮತ್ತು ರಂಗಭೂಮಿ, ಆರೋಗ್ಯ ರಕ್ಷಣೆ, ಕೌಶಲ ಅಭಿವೃದ್ಧಿ ಮುಂತಾದವುಗಳಲ್ಲಿ ಅವರ ಕೊಡುಗೆಯು ಈಶಾನ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಅಸ್ಸಾಂನಲ್ಲಿ ಬಾರ್ತಾಕೂರ್ ಅವರನ್ನು ಅಮರಗೊಳಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!