ಲತಾ ಮಂಗೇಶ್ಕರ್ ನಿಧನಕ್ಕೆ ಆರ್‌ಎಸ್‌ಎಸ್ ಸರಸಂಘಚಾಲಕ್ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್

ನಾಗ್ಪುರ: ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಅಗಲಿಕೆಯಿಂದ ನನಗಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಮೂಡಿರುವ ನೋವು ಮತ್ತು ಶೂನ್ಯತೆಯನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಎಂಟು ದಶಕಗಳಲ್ಲಿ ತನ್ನ ಧ್ವನಿಯ ಮಳೆಯಿಂದ ಭಾರತೀಯರ ಹೃದಯವನ್ನು ತೇವಗೊಳಿಸಿದ, ಸಂತೈಸಿದ, ಸಂತೈಸುವ ಸಂಪತ್ತನ್ನು ಇಂದು ನಾವು ಕಳೆದುಕೊಂಡಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಲತಾ ಜೀ ಅವರು ಪರಿಶುದ್ಧತೆ ಮತ್ತು ಸಾಧನೆಯ ದ್ಯೋತಕವಾಗಿದ್ದರು. ಅವರ ಸಂಗೀತ ಅಭ್ಯಾಸದ ಬಗ್ಗೆ ಅನೇಕರಿಗೆ ತಿಳಿದಿದೆ. ಇಷ್ಟು ದೊಡ್ಡ ಗಾಯಕರಾದ ನಂತರವೂ ಅವರು ಹಾಡನ್ನು ಹಾಡಬೇಕೆಂದರೆ 13ನೇ ವಯಸ್ಸಿನಲ್ಲಿ ಹಾಡಲು ಆರಂಭಿಸಿದಾಗ ಎಷ್ಟು ತಯಾರಿ ಮಾಡಿ ಅಭ್ಯಾಸ ಮಾಡುತ್ತಿದ್ದರೋ ಅದೇ ರೀತಿ ತಯಾರಾಗುತ್ತಿದ್ದರು. ಇದು ಅವರ ತಪಸ್ಸು. ಅವರ ವೈಯಕ್ತಿಕ, ಅವರ ಕೌಟುಂಬಿಕ, ಸಾಮಾಜಿಕ ಮತ್ತು ಅವರ ವೃತ್ತಿಜೀವನದಲ್ಲಿ ಅವರ ನಡವಳಿಕೆಯು ಪರಿಶುದ್ಧತೆ ಮತ್ತು ತಪಸ್ಸಿಗೆ ಪರಿಪೂರ್ಣ ಉದಾಹರಣೆಯಾಗಿದೆ. ಇದು ಎಲ್ಲರಿಗೂ ಮಾದರಿಯಾಗಿದೆ. ಅಂತಹ ನಿಸ್ವಾರ್ಥತೆಯಿಂದ ಯಶಸ್ವಿ ಮತ್ತು ಅರ್ಥಪೂರ್ಣ ಜೀವನದ ಉದಾಹರಣೆಯನ್ನು ಪ್ರಸ್ತುತಪಡಿಸಿದ ಲತಾ ದೀದಿ ಅಗಲಿದ್ದಾರೆ. ಮಂಗೇಶ್ಕರ್ ಕುಟುಂಬಕ್ಕೂ ಈ ನಷ್ಟವನ್ನು ಭರಿಸುವ ಹಾಗೂ ನಮಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಸಂತಾಪ ಸೂಚಿಸಿದ್ದಾರೆ.

ಲತಾ ಮಂಗೇಶ್ಕರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಧ್ವನಿಯ ರೂಪದಲ್ಲಿ ಉಳಿಯುತ್ತಾರೆ ಎಂದಿರುವ ಡಾ. ಮೋಹನ್ ಭಾಗವತ್, ಸಂಘದ ಪರವಾಗಿ ಮತ್ತು ನನ್ನ ವೈಯಕ್ತಿಕ ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!