ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಕೆರ್ಚ್ ಸೇತುವೆ ಬಾಂಬ್ ಸ್ಫೋಟದಿಂದಾಗಿ ಹಾನಿಗೀಡಾಗಿತ್ತು. ಇದಕ್ಕೆ ಉಕ್ರೇನ್ ಕಾರಣ ಎಂದು ತಿಳಿದ ರಷ್ಯಾ ಉಕ್ರೇನ್ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಆದರೆ, ಕೆರ್ಚ್ ಸೇತುವೆಯ ಬಾಂಬ್ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ ಪುಟಿನ್ ದುಷ್ಕರ್ಮಿಗಳ ವಿರುದ್ಧ ಕಠಿಣವಾಗಿ ಕ್ರಮ ಕೈಗೊಳ್ಳಲು ಬಲೆ ಬೀಸಿದರು.
ಕೆರ್ಚ್ ಸೇತುವೆ ಸ್ಫೋಟಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ರಷ್ಯಾ ಹೇಳಿದೆ. ಅವರಲ್ಲಿ ಐವರು ರಷ್ಯಾದ ಪ್ರಜೆಗಳು ಎಂಬುದು ಗಮನಾರ್ಹ. ಉಳಿದ ಮೂವರು ಉಕ್ರೇನ್ ಮತ್ತು ಅರ್ಮೇನಿಯಾದ ಪ್ರಜೆಗಳು ಎಂದು ತಿಳಿದುಬಂದಿದೆ. ಈ ಸ್ಫೋಟಗಳ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾದ ಗುಪ್ತಚರ ಸಂಸ್ಥೆ ಎಫ್‌ಎಸ್‌ಬಿ ಹೇಳಿಕೊಂಡಿದೆ.
ಸೇತುವೆಯನ್ನು ಸ್ಫೋಟಿಸಲು 23 ಟನ್ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ರಷ್ಯಾದ ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ಸ್ಫೋಟಕಗಳನ್ನು ಆಗಸ್ಟ್‌ನಲ್ಲಿ ಉಕ್ರೇನಿಯನ್ ಬಂದರು ನಗರವಾದ ಒಡೆಸ್ಸಾದಿಂದ ಕಳುಹಿಸಲಾಗಿದೆ ಮತ್ತು ಅವು ಬಲ್ಗೇರಿಯಾ, ಜಾರ್ಜಿಯಾ ಮತ್ತು ಅರ್ಮೇನಿಯಾ ಮೂಲಕ ಇಲ್ಲಿಗೆ ಬಂದಿವೆ ಎಂದು ಎಫ್‌ಎಸ್‌ಬಿ ಪ್ರಕಟಣೆಯಲ್ಲಿ ತಿಳಿಸಿದೆ.