ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ – ರಷ್ಯಾ ನಡುವಿನ ಕದನ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಜೊತೆಗೆ ಹಲವಾರು ರಾಷ್ಟ್ರಗಳನ್ನು ಸೇರಿಸಿಕೊಂಡು ಮತ್ತಷ್ಟು ವಿಸ್ತಾರವಾಗುತ್ತಿದೆ. ಉಕ್ರೇನ್ ನಲ್ಲಿ ರಷ್ಯಾ ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿದ ಬೆನ್ನಲ್ಲೇ, ಇಷ್ಟು ದಿನ ಪರೋಕ್ಷ ಬೆಂಬಲ ನೀಡುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಇದೀಗ ಬಹಿರಂಗವಾಗಿ ಉಕ್ರೇನ್ ಬೆಂಬಲಕ್ಕೆ ಮಧ್ಯ ಪ್ರವೇಶಿಸುತ್ತಿವೆ.
ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿ ಪಟ್ಟಕ್ಕೇರಿದ ರಿಷಿ ಸುನಾಕ್ ತಾವು ಉಕ್ರೇನ್‌ಗೆ ಎಲ್ಲಾ ರೀತಿಯ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿದ್ದಾರೆ. ರಿಷಿ ಸುನಾಕ್ ಕೀವ್‌ಗೆ ಭೇಟಿ ನೀಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ಜೊತೆಗೆ ಮಾತುಕತೆ ನಡೆಸಿ ಉಕ್ರೇನ್ ಗೆ ನೇರಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ರಷ್ಯಾದ ಡ್ರೋನ್ ದಾಳಿಗೆ ಪ್ರತ್ಯುತ್ತರ ನೀಡಲು 125 ಆ್ಯಂಟಿ ಏರ್‌ಕ್ರಾಫ್ಟ್ ಗನ್ (ವಾಯು ರಕ್ಷಣಾ ವ್ಯವಸ್ಥೆಗೆ) ಗಳನ್ನು ಪೂರೈಸುವುದಾಗಿ ಹಾಗೂ 50 ಮಿಲಿಯನ್ ಡಾಲರ್ ಪ್ಯಾಕೇಜ್ ಪೂರೈಸುವುದಾಗಿ ಘೋಷಣೆ ಮಾಡಿದ್ದಾರೆ.|ಕಳೆದ ವಾರ, ಉಕ್ರೇನಿಯನ್ ಪಡೆಗಳ ಮೂಲಸೌಕರ್ಯ ವ್ಯವಸ್ಥೆ ಮೇಲೆ ರಷ್ಯಾ 148 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸುರಿಸಿದ್ದು, ಸರಿಸುಮಾರು 10 ಮಿಲಿಯನ್ ಜನರು ವಿದ್ಯುತ್, ಮೂಲಸೌಕರ್ಯ ವ್ಯವಸ್ಥೆಯನ್ನು ಕಳೆದುಕೊಂಡಿದ್ದಾರೆ. ಇದೇ ಹಂತದಲ್ಲಿ ಮಧ್ಯಪ್ರವೇಶಿಸಿರುವ ಇಂಗ್ಲೆಂಡ್ ಉಕ್ರೇನಿಯನ್ ಸಶಸ್ತ್ರ ಪಡೆಗಳಿಗೆ ಕೊಡುಗೆಯನ್ನು ಬಲಪಡಿಸುತ್ತಿದೆ. ವಿಶೇಷ ಬೆಂಬಲವನ್ನು ನೀಡಲು ಹಾಗೂ ತರಬೇತಿಗೆ ಯುದ್ಧಪೀಡಿತ ಪ್ರದೇಶಕ್ಕೆ ಪರಿಣಿತ ಸೇನಾ ವೈದ್ಯರು ಮತ್ತು ಎಂಜಿನಿಯರ್‌ಗಳನ್ನು ಕಳುಹಿಸುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ