ರಷ್ಯದಿಂದ ಭಾರತ ವಿನಾಯತಿ ತೈಲ ಪಡೆಯುವುದು ತಪ್ಪೇ? ಪಾಶ್ಚಾತ್ಯರ ಡಬಲ್ ಸ್ಟ್ಯಾಂಡರ್ಡ್ ಹೇಗಿದೆ ನೋಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪಾಶ್ಚಾತ್ಯ ನಿರ್ಬಂಧಗಳಿಂದ ತತ್ತರಿಸಿರುವ ರಷ್ಯವು ಭಾರತಕ್ಕೆ ವಿನಾಯತಿ ದರದಲ್ಲಿ ತೈಲವನ್ನು ಒದಗಿಸುವ ಪ್ರಸ್ತಾಪ ಇರಿಸಿದಾ ಹಾಗೂ ಭಾರತವು ಇದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಪ್ರಶ್ನೆಗಳು ತೆರೆದುಕೊಂಡಿವೆ. ಪಾಶ್ಚಾತ್ಯ ಜಗತ್ತು ರಷ್ಯವನ್ನು ಆರ್ಥಿಕವಾಗಿ ಶಿಕ್ಷಿಸುತ್ತಿರುವಾಗ ಭಾರತವು ತೈಲ ಸೇರಿದಂತೆ ಇನ್ಯಾವುದೇ ವಿಷಯದಲ್ಲಿ ವ್ಯಾಪಾರ ವೃದ್ಧಿಸಿಕೊಳ್ಳುವುದು ಸರಿಯೇ ಎಂಬುದು ಆ ಪ್ರಶ್ನೆ.

ಅಮೆರಿಕದ ಪತ್ರಕರ್ತರೆಂದು ಹೇಳಿಕೊಳ್ಳುವ ಕೆಲವು ಬ್ಲೂಟಿಕ್ ಟ್ವಿಟರ್ ಬಳಕೆದಾರರು, ಭಾರತವು ಹೀಗೆ ಮಾಡಿದ್ದೇ ಆದರೆ ಅಮೆರಿಕವು ಭಾರತದ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದೆಲ್ಲ ಬರೆದುಕೊಂಡರು.

ದ್ವಿಮುಖ ನೀತಿ

ನಿಮಗೆ ಗೊತ್ತಿರಲಿ. ನ್ಯಾಟೊ ಮತ್ತು ಅಮೆರಿಕವನ್ನು ಎದುರುಹಾಕಿಕೊಂಡು ರಷ್ಯ ಯುದ್ಧ ಶುರುಮಾಡಿ ಮೂರು ವಾರಗಳೇ ಆಗಿದ್ದರೂ ಅದರ ಗ್ಯಾಸ್ ಮತ್ತು ತೈಲಕ್ಕೆ ನಿರ್ಬಂಧ ಹೇರಿರುವುದು ಅಮೆರಿಕ ಮಾತ್ರ. ಉಳಿದಂತೆ ನ್ಯಾಟೊ ಸದಸ್ಯತ್ವದ ಯುರೋಪಿಯನ್ ದೇಶಗಳು ನಾರ್ಡ್ ಸ್ಟ್ರೀಮ್ 1 ಪೈಪ್ಲೈನ್ ಮುಖಾಂತರ ಇಂಧನ ತರಿಸಿಕೊಳ್ಳುತ್ತಲೇ ಇವೆ. ಅಮೆರಿಕ ಕೇವಲ ಶೇ. 1 ರಷ್ಟು ರಷ್ಯ ತೈಲವನ್ನು ತರಿಸಿಕೊಳ್ಳುತ್ತಿತ್ತು. ಅದನ್ನು ನಿರ್ಬಂಧಿಸಿರುವುದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ಆದರೆ ರಷ್ಯ ಇಂಧನವನ್ನು ಅವಲಂಬಿಸಿರುವ ಯುರೋಪ್ ಅಷ್ಟು ಸುಲಭದಲ್ಲಿ ಹೊರಬರುವುದು ಸಾಧ್ಯವೇ ಇಲ್ಲದ ಮಾತು.

ಹೀಗಿರುವಾಗ ಅದ್ಯಾವ ಮುಖ ಇಟ್ಟುಕೊಂಡು ಪಾಶ್ಚಾತ್ಯ ಜಗತ್ತು ಭಾರತಕ್ಕೆ ರಷ್ಯದ ಜತೆ ವ್ಯಾಪಾರ ಮಾಡದಂತೆ ಹೇಳುತ್ತದೆ ಎಂಬುದು ವಿಶ್ಲೇಷಕರು ಕೇಳುತ್ತಿರುವ ಪ್ರಶ್ನೆ.

ಭಾರತಕ್ಕಿವೆ ಕೆಲವು ಸವಾಲುಗಳು

ರಷ್ಯದ ತೈಲ ಪ್ರಸ್ತಾವವನ್ನು ದೊಡ್ಡಮಟ್ಟದಲ್ಲಿ ಭಾರತ ಒಪ್ಪಿಕೊಳ್ಳುವುದಕ್ಕೆ ಕೆಲವು ಸವಾಲುಗಳಿವೆ. ಹಾಗಂತ, ಅಮೆರಿಕಕ್ಕೆ ಹೆದರಿಕೊಂಡೇನೂ ಭಾರತ ಕುಳಿತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ರಿಕಾ ಸಂಪಾದಕರುಗಳೊಂದಿಗೆ ಸಂವಾದ ನಡೆಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಂಥ ಒಂದು ಸವಾಲನ್ನು ವಿವರಿಸಿದ್ದರು. ತೈಲದ ಹಡಗುಗಳಿಗೆ ವಿಮೆ ಇರಬೇಕಾಗುತ್ತದೆ. ಯುದ್ಧದ ಸಂದರ್ಭದಲ್ಲಿ ಅದನ್ನು ಖಚಿತಪಡಿಸಿಕೊಳ್ಳುವುದು ಕಷ್ಟ. ವಿಮಾ ಕಂಪನಿಗಳು ಸಹಜವಾಗಿಯೇ ದೂರ ಉಳಿಯುತ್ತವೆ. ಅಂತೆಯೇ ಕಚ್ಚಾತೈಲ ಯಾವ ಬಂದರಿಗೆ ಬರಬೇಕು, ಅಲ್ಲಿ ಇಳಿಸಿಕೊಳ್ಳುವ ಪೂರಕ ವ್ಯವಸ್ಥೆಗಳೇನು ಎಂಬುದರ ರೂಪುರೇಷೆಗಳು ಆಗಬೇಕಿರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!