ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ರಷ್ಯಾ ಸಂಬಂಧಗಳಿಗೆ ಹೊಸ ಚೈತನ್ಯ ತುಂಬುವ ಮಹತ್ವದ ಬೆಳವಣಿಗೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
ಡಿಸೆಂಬರ್ 5ರಂದು ನಡೆಯಲಿರುವ 23ನೇ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಭದ್ರತೆ ಮತ್ತು ಜಾಗತಿಕ ರಾಜಕೀಯ ಸ್ಥಿತಿಗತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾಸ್ಕೋಗೆ ಭೇಟಿ ನೀಡಿದ್ದ ವೇಳೆ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋವ್ ಅವರೊಂದಿಗೆ ಮಾತುಕತೆ ನಡೆಸಿ ಈ ಶೃಂಗಸಭೆಯ ದಿನಾಂಕ ಅಂತಿಮಗೊಳಿಸಿದ್ದರು.
ಅಮೆರಿಕದ ಸುಂಕ ನೀತಿಗಳ ನಡುವೆಯೇ ರಷ್ಯಾದಿಂದ ತೈಲ ಆಮದು ಮುಂದುವರಿಸುತ್ತಿರುವ ಭಾರತಕ್ಕೆ ಈ ಸಭೆ ರಾಜತಾಂತ್ರಿಕ ದೃಷ್ಟಿಯಿಂದ ಮಹತ್ವದ ತಿರುವಾಗಲಿದೆ. ಕಳೆದ ವರ್ಷ ಮೋದಿ ಅವರ ಮಾಸ್ಕೋ ಪ್ರವಾಸದ ಬಳಿಕ ಎರಡೂ ರಾಷ್ಟ್ರಗಳ ನಡುವೆ ಕೈಗೂಡಿದ್ದ ಒಪ್ಪಂದಗಳಿಗೆ ಈಗ ಹೊಸ ವೇಗ ಸಿಗುವ ನಿರೀಕ್ಷೆ ಇದೆ.

