ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಬಳಿಕ ಗಾಲ್ಫ್ ಕಾರ್ಟ್ (ಎಲೆಕ್ಟ್ರಿಕ್ ಸಣ್ಣ ವಾಹನ) ಅನ್ನು ಡ್ರೈವ್ ಮಾಡಿಕೊಂಡು ಮೋದಿಯನ್ನು ಪಕ್ಕದಲ್ಲಿ ಕೂರಿಸಿ ಅವರು ನಿವಾಸದ ಸುತ್ತಲೂ ಸವಾರಿ ಮಾಡಿದ್ದಾರೆ.
ಅದರ ವಿಡಿಯೊ ಇದೀಗ ವೈರಲ್ ಆಗಿದೆ. ಮಾಸ್ಕೋ ಬಳಿಯ ನೊವೊ-ಒಗಾರಯೋವೊದಲ್ಲಿರುವ ಪುಟಿನ್ ಅವರ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಪುಟಿನ್ ಮತ್ತು ಇಬ್ಬರು ಪ್ರತಿನಿಧಿಗಳೊಂದಿಗೆ ಗಾಲ್ಫ್ ಕಾರ್ಟ್ನಲ್ಲಿ ಸುತ್ತುವುದು ಕಂಡು ಬಂತು.
ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಭೇಟಿಯಾದ ನಂತರ, ಪ್ರಧಾನಿ ಮೋದಿ ಪುಟಿನ್ ಅವರೊಂದಿಗೆ ಅವರ ನಿವಾಸದಲ್ಲಿ ಅನೌಪಚಾರಿಕ ಸಭೆ ನಡೆಸಿದರು. ಅಲ್ಲಿ, ಉಭಯ ನಾಯಕರು ಟೆರೇಸ್ನಲ್ಲಿ ಚಹಾ ಸೇವಿಸಿದರು. ಬಳಿಕ ಪುಟಿನ್ ಅವರ ಕುದುರೆಗಳಿರುವ ಲಾಯಗಳಿಗೆ ಭೇಟಿ ನೀಡಿದರು.
ಅನೌಪಚಾರಿಕ ಮಾತುಕತೆಯ ನಂತರ, ಪಿಎಂ ಮೋದಿ ಪುಟಿನ್ ಅವರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು. ಈ ಭೇಟಿಯು ಅತ್ಯಂತ ಸಂತೋಷದ ಕ್ಷಣ” ಎಂದು ಬಣ್ಣಿಸಿದರು. “ನಾಳೆ ನಡೆಯಲಿರುವ ನಮ್ಮ ಮಾತುಕತೆ ಬಗ್ಗೆ ಎದುರು ನೋಡುತ್ತಿದ್ದೇನೆ. ಇದು ಖಂಡಿತವಾಗಿಯೂ ಭಾರತ ಮತ್ತು ರಷ್ಯಾ ನಡುವಿನ ಸ್ನೇಹದ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುಸಲಿದೆ” ಎಂದು ಪಿಎಂ ಮೋದಿ ನಂತರ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ರಷ್ಯಾದ ನಾಯಕ ತನ್ನ ಭಾರತೀಯ ಅತಿಥಿಗೆ ಭರ್ಜರಿ ಆತಿಥ್ಯ ನೀಡಿದರು. ಹೆಚ್ಚಿನ ಸಮಯ ಅವರು ಭಾಷಾಂತರಕಾರರ ಮೂಲಕ ಮಾತನಾಡಿದರು. ಆದಾಗ್ಯೂ, ಅವರು ಕಾರು ಬಿಟ್ಟು ಉದ್ಯಾನದ ಬಳಿ ನಡೆದುಕೊಂಡು ಹೋಗುವಾಗ ಪರಸ್ಪರ ಮಾತನಾಡಿಕೊಂಡರು.