November 1, 2026
Sunday, November 1, 2026
spot_img

ಸಾರ್ವಜನಿಕ ಸ್ಥಳಕ್ಕೆ ಶೌಚ ನೀರು: ಸೋಮೇಶ್ವರ ಪುರಸಭೆ ಆಡಳಿತ, ಪ್ರತಿಪಕ್ಷ ಸದಸ್ಯರು ಗರಂ, ‘ದಂಡಾಸ್ತ್ರ’ ಪ್ರಯೋಗಕ್ಕೆ ಆಗ್ರಹ

ಹೊಸದಿಗಂತ ವರದಿ ಉಳ್ಳಾಲ:

ಬಹು ಮಹಡಿ ಕಟ್ಟಡಗಳು ಹಾಗೂ ಮನೆಗಳ‌ ಶೌಚ ಕೊಳಚೆ ನೀರನ್ನು ಸಾರ್ವಜನಿಕ ಪ್ರದೇಶಗಳಿಗೆ ಹರಿಬಿಡುವವರ ವಿರುದ್ಧ ಭಾರೀ ದಂಡಾಸ್ತ್ರವನ್ನು ಪ್ರಯೋಗಿಸುವಂತೆ ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರು ಒಕ್ಕೊರಳ ಆಗ್ರಹ ನಡೆಸಿದ್ದಾರೆ.

ಸೋಮೇಶ್ವರ ಪುರಸಭೆ ಅಧ್ಯಕ್ಷರಾದ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಬಿಜೆಪಿ ಪಕ್ಷದ ಸದಸ್ಯೆ ಸ್ವಪ್ನಾ ಶೆಟ್ಟಿ ಮಾತನಾಡಿ, ತನ್ನ ವಾರ್ಡಲ್ಲಿ ಬಹು ಮಹಡಿ ಕಟ್ಟಡಗಳ ಶೌಚ ಕೊಳಚೆ ನೀರನ್ನ ಚರಂಡಿ,ರಸ್ತೆಗಳಿಗೆ ಹರಿ ಬಿಡುವ ವಿಚಾರದಲ್ಲಿ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ಸಲ್ಲಿಸುವ ಬಗ್ಗೆ ಪುರಸಭೆಗೆ ಅರ್ಜಿ ಸಲ್ಲಿಸಲಾಗಿದೆ.ಆದರೆ ಇದುವರೆಗೂ ಕೊಳಚೆ ನೀರನ್ನ ಹರಿ ಬಿಡುವ ಬಹುಮಹಡಿ ಕಟ್ಟಡಗಳ ವಿರುದ್ಧ ಕ್ರಮ ಜರಗಿಸಿಲ್ಲ. ಸ್ಥಳೀಯ ಜನರು ಇದರಿಂದ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆಯೆಂದರು.

ಸ್ವಪ್ನ ಅವರೊಂದಿಗೆ ಧ್ವನಿಗೂಡಿಸಿದ ಆಡಳಿತ ಪಕ್ಷ ಸದಸ್ಯ ಜಯ ಪೂಜಾರಿಯವರು ಮುಂಡೋಳಿ ಶಾಂತಿಭಾಗ್ ವಸತಿ ಸಮುಚ್ಚಯಗಳಿಂದಲೂ ಶೌಚ ತ್ಯಾಜ್ಯ ನೀರನ್ನು ಸಾರ್ವಜನಿಕ ಸ್ಥಳಗಳಿಗೆ ಹರಿ ಬಿಡಲಾಗುತ್ತಿದ್ದು, ಇದನ್ನು ನಿಲ್ಲಿಸಬೇಕೆಂದರು.

ಇದಕ್ಕುತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಮತ್ತಡಿ ಅವರು ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದು,ಪುರಸಭೆಯಿಂದ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟೀಸು ಮಾಡಲಾಗಿದೆಯೆಂದರು.

ಈ ವೇಳೆ ಮಧ್ಯ‌ ಪ್ರವೇಶಿಸಿದ ಆಡಳಿತ ಪಕ್ಷ ಸದಸ್ಯ ಹರೀಶ್ ಕುಂಪಲ ಅವರು ನೋಟೀಸು ನೀಡುವುದಷ್ಟೆ ಇಂತಹ ಸಮಸ್ಯೆಗಳಿಗೆ ಪರಿಹಾರವೇ..? ಸಾರ್ವಜನಿಕ ಸ್ಥಳಗಳಲ್ಲಿ ಶೌಚ ತ್ಯಾಜ್ಯ ಸೋರಿಕೆ ತಡೆಗಟ್ಟಲು ಪುರಸಭೆ ಆಡಳಿತಕ್ಕೆ ಜವಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.

ಬಹುಮಹಡಿ ಕಟ್ಟಡಗಳು ಶೌಚ ತ್ಯಾಜ್ಯ ಸಂಸ್ಕರಣಾ ಘಟಕ ಮಾಡುವವರೆಗೆ ಅವರಿಗೆ ಮಾಸಿಕವಾಗಿ ಸಾವಿರ ಅಲ್ಲ ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ದಂಡ ಪ್ರಯೋಗಾಸ್ತ್ರದ ಕಠಿಣ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು.

ಪುರಸಭೆ ಉಪಾಧ್ಯಕ್ಷ ರವಿಶಂಕರ್ ಮಾತನಾಡಿ ಶೌಚ ತ್ಯಾಜ್ಯ ಸೋರಿಕೆ ನಡೆಸುವ ಮನೆ ಮತ್ತು ಕಟ್ಟಡಗಳಿಗೆ ನೋಟೀಸು ನೀಡಿ ಸಾಕಾಗಿದೆ.ಬೈಪಾಸ್ ,ಮುಂಡೋಳಿ,ದಾರಂದಬಾಗಿಲು ಪ್ರದೇಶಗಳಲ್ಲಿ ಸಮಸ್ಯೆ ಉಲ್ಭಣಿಸಿದೆ.ಕಾನೂನು ಉಲ್ಲಂಘಿಸುವವರಿಗೆ ಕಠಿಣ ದಂಡಾಸ್ತ್ರ ಪ್ರಯೋಗಿಸುವ ಬಗ್ಗೆ ನೋಟೀಸು ಮಾಡುವ ನಿರ್ಣಯ ಕೈಗೊಳ್ಳೋಣವೆಂದರು.

ಮನೆಗಳಿಂದ‌ಲೂ‌ ಕೊಳಚೆ ನೀರು ಹರಿ ಬಿಡುವುದು ನಿಲ್ಲಬೇಕು. ಅಂತವರಿಗೆ ನಾವು ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇವೆ.ನಿಯಮ ಉಲ್ಲಂಘಿಸಿ ಶೌಚ ನೀರನ್ನು ಬಿಡುವ ಮನೆಗಳು ಹಾಗೂ ಬಹುಮಹಡಿ ಕಟ್ಟಡಗಳಿಗೆ ಎಷ್ಟು ದಂಡ ವಿಧಿಸಬಹುದೆಂಬ ಬಗ್ಗೆ ನಿರ್ಣಯ ಮಾಡಿ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು.

ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಹಾಯಕ ಅಭಿಯಂತರ ಶ್ರೀಕಾಂತ್ ಮಾತನಾಡಿ ಅಮೃತ್ 2.0 ಕುಡಿಯುವ ನೀರು ಸರಬರಾಜು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.ಎರಡೂವರೆ ಕಿಮೀ ನಷ್ಟು ಪೈಪ್ ಲೈನ್ ಅಳವಡಿಕೆ ಹಾಗೂ ಸುಮಾರು 300 ಹೆಚ್ಚುವರಿ ಮನೆಗಳಿಗೆ ಸಂಪರ್ಕ ನೀಡುವ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು,ಮುಂದಿನ ಜನವರಿ ತಿಂಗಳೊಳಗೆ ಅದನ್ನ ಪೂರ್ತಿಗೊಳಿಸುವುದಾಗಿ ಭರವಸೆ ನೀಡಿದರು.

ಪಿಲಾರುವಿನಲ್ಲಿ ಅಮೃತ್ 2.0 ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ.ಹೊಸತಾಗಿ ಅಳವಡಿಸಿದ ಪೈಪ್ ಲೈನ್ ಸೋರಿಕೆ ಆಗುತ್ತಿದೆ.ಕೆಲವು ಕಡೆಗಳಲ್ಲಿ ಕಾಮಗಾರಿ ನಡೆಸಿದ ಜಾಗದಲ್ಲಿ ಗುಂಡಿಗಳನ್ನ ಸರಿಯಾಗಿ ಮುಚ್ಚಿಲ್ಲ.ಈ ಅವ್ಯವಸ್ಥೆಗಳನ್ನ ಶೀಘ್ರ ಸರಿಪಡಿಸಬೇಕೆಂದು ವಿಪಕ್ಷ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ ಆಗ್ರಹಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಉಪಸ್ಥಿತರಿದ್ದರು.

Must Read