ಹೊಸದಿಗಂತ ಡಿಜಿಟಲ್ ಡೆಸ್ಕ್:
- ಐ.ಬಿ. ಸಂದೀಪ್ ಕುಮಾರ್
ಪಶ್ಚಿಮ ಘಟ್ಟಗಳಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಜೈವಿಕ ವೈವಿದ್ಯತೆಯ ವಿಶ್ವದ 38 ಹಾಟ್‍ಸ್ಪಾಟ್‍ಗಳ ಒಂದು ಭಾಗವಾಗಿ ಮಾನ್ಯತೆ ಪಡೆದುಕೊಂಡಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂದಿಸುವ ಪ್ರದೇಶವಾಗಿರುವ ಕುದುರೆಮುಖ ಜಾಗತಿಕ ಹುಲಿ ಸಂರಕ್ಷಣೆಯ ಆದ್ಯತೆಯಡಿ ಗುರುತಿಸಲ್ಪಟ್ಟಿರುವ ವಿಶ್ವದ 34 ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿದೆ. ವಿಪರ್ಯಾಸವೆಂದರೆ ಸೌತ್ ಕೆನರಾ(ಎಸ್.ಕೆ. ಬಾರ್ಡರ್) ಗಡಿ ಪ್ರದೇಶದಿಂದ ಕುದುರೆಮುಖ-ಸಂಸೆ, ಕುದುರೆಮುಖ-ಕೊಟ್ಟಿಗೆಹಾರ ರಸ್ತೆಗಳು ಮಾತ್ರ ಸಂಚಾರಕ್ಕೆ ಅಯೋಗ್ಯ ರಸ್ತೆಯಾಗಿ ಪರಿಣಮಿಸಿದೆ. ವಿಶೇಷವೆಂದರೆ ಈ ಪ್ರಮುಖ ರಸ್ತೆಯ ದುರಸ್ತಿಗೆ ಸರಕಾರ ಒದಗಿಸಿರುವ ಮೊತ್ತ ಕೇವಲ ರೂ.55 ಲಕ್ಷ ಮಾತ್ರ!
ಭಯಾನಕ ಸಂಚಾರ
ಎಸ್.ಕೆ. ಬಾರ್ಡರ್ ನಿಂದ ಕುದುರೆಮುಖದತ್ತ ತೆರಳುವ ರಾಜ್ಯ ಹೆದ್ದಾರಿ 13 ದುರಸ್ತಿಯಾಗದೆ ಸುಗಮ ಸಂಚಾರ ಆತಂಕಿತವಾಗಿದೆ. ಈ ಪ್ರಮುಖ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ-ಗುಂಡಿಗಳು, ರಸ್ತೆಯ ಮೇಲ್ಪದರ ಕಿತ್ತು ಹೋಗಿದೆ.
ಎಸ್.ಕೆ. ಬಾರ್ಡರ್ ನಿಂದ ಕೊಟ್ಟಿಗೆಹಾರದವರೆಗಿನ ಸುಮಾರು 91 ಕಿ.ಮೀ. ರಸ್ತೆ ನಾದುರಸ್ತಿ ಸ್ಥಿತಿಯಲ್ಲಿದ್ದು, ದುರಸ್ತಿಗಾಗಿ ಕಾದು ಕುಳಿತಂತಿದೆ. ಈ ರಸ್ತೆಗಳಲ್ಲಿ ರಾತ್ರಿ ವೇಳೆಯಂತೂ ಸಂಚಾರ ಸಂಚಕಾರವಾಗಿ ಪರಿಣಮಿಸಿದೆ. ರಸ್ತೆಯ ಕಡಿದಾದ ತಿರುವುಗಳಲ್ಲಂತೂ ಬಹಳಷ್ಟು ಜಾಗರೂಕರಾಗಿ ಸಂಚರಿಸಬೇಕಾದ ಅನಿವಾರ್ಯತೆಯಿದೆ.
ಜುಜುಬಿ ಮೊತ್ತ
ಕುದುರೆಮುಖ-ಕೊಟ್ಟಿಗೆಹಾರ ನಡುವಣ ಸುಮಾರು 91 ಕಿ.ಮೀ. ಅಂತರವಿದೆ. ಆದರೆ, ಈ ಪ್ರಮುಖ ರಾಜ್ಯ ಹೆದ್ದಾರಿಯನ್ನು ಮರುಡಾಮರೀಕರಣಗೊಳಿಸದೆ ಅನೇಕ ವರ್ಷಗಳೇ ಕಳೆದಿದೆ. ಸುಮಾರು 5 ವರ್ಷಗಳ ಹಿಂದೊಮ್ಮೆ ತೇಪೆ ಕಾಮಗಾರಿ ನಡೆಸಲಾಗಿತ್ತು. ಇದೀಗ ಈ ರಸ್ತೆಯ ತೇಪೆ ಕಾಮಗಾರಿ ನಡೆಸಲು ಕೇವಲ ರೂ.55 ಲಕ್ಷ ಮೊತ್ತವನ್ನು ಮಂಜೂರು ಮಾಡಲಾಗಿದೆ. ಇದು `ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಈಗಾಗಲೇ ರಸ್ತೆಯ ಇಕ್ಕೆಲಗಳನ್ನು ಜೆಸಿಬಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸುವ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಕೇವಲ ರೂ.55 ಲಕ್ಷ ಮೊತ್ತದಲ್ಲಿ ತೇಪೆ ಕಾಮಗಾರಿ ಸೇರಿದಂತೆ ರಸ್ತೆ ಅಗಲೀಕರಣ ಕಾಮಗಾರಿಯನ್ನೂ ನಡೆಸಬೇಕಾದಂತಹ ದುಃಸ್ಥಿತಿ ಎದುರಾಗಿದೆ. ಇದೀಗ ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ರಸ್ತೆಯ ಇಕ್ಕೆಲಗಳ ಚರಂಡಿಗಳನ್ನು ಮುಚ್ಚಲಾಗುತ್ತಿದ್ದು, ಮೂರು ಜೆಸಿಬಿಗಳನ್ನು ಬಳಸಿಕೊಂಡು ಈ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ವಿಸ್ತರಣೆ ಕಾರ್ಯ ನಡೆಸಿ ಪೂರ್ಣಗೊಳಿಸುವಾಗ ಬಿಡುಗಡೆಯಾಗಿರುವ ಮೊತ್ತವೂ ಮುಗಿದು ಹೋಗುತ್ತದೆ. ಬಳಿಕ ಕಳಪೆ ಕಾಮಗಾರಿ ನಡೆಸಿ ಕೈತೊಳೆದುಕೊಳ್ಳಲಾಗುತ್ತದೆ ಎಂಬುದು ಊರವರ ಆಕ್ರೋಶ.
ಮಾರ್ಚ್ ಒಳಗಡೆ ಪೂರ್ಣ
ಎಸ್.ಕೆ. ಬಾರ್ಡರ್ ನಿಂದ ಕೊಟ್ಟಿಗೆಹಾರ ನಡುವಣದ ಸುಮಾರು 91 ಕಿ.ಮೀ. ಅಂತರವಿದೆ. ಇದರಲ್ಲಿ ಸುಮಾರು 10 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ಸುಪರ್ದಿಗೆ ಬರುತ್ತದೆ. ಎಸ್.ಕೆ. ಬಾರ್ಡರ್ ನಿಂದ ಕೊಟ್ಟಿಗೆಹಾರ ನಡುವಿನ ರಸ್ತೆಯನ್ನು ತೇಪೆ ಹಾಕಿ ದುರಸ್ತಿ ಮಾಡಲು ಈಗಾಗಲೇ ರೂ.55 ಲಕ್ಷ ಮೊತ್ತ ಮಂಜೂರಾಗಿದೆ. ಈಗಾಗಲೇ ರಸ್ತೆಯ ಬದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಗೊಂಡಿದೆ. ಮಾರ್ಚ್ ಒಳಗಡೆ ರಸ್ತೆಯನ್ನು ಸಂಪೂರ್ಣ ದುರಸ್ತಿಗೊಳಿಸಿ ಸಂಚಾರ ಯೋಗ್ಯವನ್ನಾಗಿ ಮಾಡಲಾಗುವುದು ಎಂದು ಮೂಡಿಗೆರೆ ವಿಭಾಗದ ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತೀಶ್ ಕುಮಾರ್ ಕೆ. ತಿಳಿಸಿದ್ದಾರೆ.
ವಾಹನಗಳಿಗೂ ಹಾನಿ
ನಾವು ಕಳಸ-ಮಂಗಳೂರು-ಉಡುಪಿ ಮಧ್ಯೆ ಆಗಾಗ ಕಾರ್ಯ ನಿಮಿತ್ತ ಓಡಾಟ ನಡೆಸುತ್ತಿರುತ್ತೇವೆ. ಆದರೆ, ಕಳಸದಿಂದ ಎಸ್.ಕೆ. ಬಾರ್ಡರ್ ತನಕದ ರಸ್ತೆ ತೀರಾ ಹದಗೆಟ್ಟಿರುವ ಕಾರಣ ಪ್ರಯಾಣದ ಅವಧಿ ಹೆಚ್ಚಾಗುತ್ತದೆ. ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಹಾನಿಯಾಗುತ್ತದೆ. ಇದೀಗ ಒಂದಿಷ್ಟು ಮೊತ್ತವನ್ನು ಸರಕಾರ ಬಿಡುಗಡೆಗೊಳಿಸಿದ್ದು, ಇದರಿಂದ ಯಾವ ರೀತಿಯಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಾಧ್ಯ? ಲೋಕೋಪಯೋಗಿ ಇಲಾಖೆ ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ರಸ್ತೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕಳಸದ ಕಾಫಿ ಪ್ಲಾಂಟರ್ ವಿಶುೃತ್ ಬಿ.ವೈ. ಒತ್ತಾಯಿಸಿದ್ದಾರೆ.