ಹೊಸದಿಗಂತ ವರದಿ ಮುಂಡಗೋಡ:
ರೈತನ ಮಗನಾಗಿ ಬಡತನದಲ್ಲಿ ಬೆಳೆದು, ಗದ್ದೆಯಲ್ಲಿ ಕೆಲಸವನ್ನು ಮಾಡುತ್ತಾ ವ್ಯಾಯಾಮ ಮಾಡಿಕೊಂಡಿದ್ದ ಯುವಕನೊಬ್ಬ ಶನಿವಾರ ಕುಮಟಾದಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ. ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಪಟ್ಟಣದ ಅಂಬೇಡ್ಕರ್ ಓಣೆಯ ಸಚಿನ್ ಕೊರವರ ಎಂಬ ಯುವಕ ಕುಮಟಾದಲ್ಲಿ ಜರುಗಿದ 55 ಕೆಜಿ ತೂಕದ ಜಿಲ್ಲಾ ಮಟ್ಟದ ದೇಹದಾರ್ಢ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಬಡ ಕುಟುಂಬದಲ್ಲಿ ಹುಟ್ಟಿದ ಸಚಿನ್ ಕೊರವರ ತಂದೆಯ ಎರಡು ಎಕರೆ ಗದ್ದೆಯಲ್ಲಿ ಪ್ರತಿದಿನ ಕೆಲಸವನ್ನು ಮಾಡುತ್ತಾ, ದಿನದಲ್ಲಿ ಒಂದು ಗಂಟೆ ಸಮಯದಲ್ಲಿ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಜೈ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮ ಮಾಡುತ್ತಿದ್ದ. ಬಡತನದಲ್ಲಿ ಶಿಕ್ಷಣ ಪಡೆಯಲಾಗದೆ ಹತ್ತನೇ ತರಗತಿವರೆಗೆ ಓದಿ, ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದನು. ತನ್ನ ಗೆಳೆಯರೆಲ್ಲರು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಒಳ್ಳೆಯ ಕೆಲಸದಲ್ಲಿರುವಾಗ ತಾನು ಏನಾದರು ಮಾಡಲೇಬೇಕು ಎಂಬ ಛಲದಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ವ್ಯಾಯಾಮ ಮಾಡುತ್ತಾ ಬಂದು ವಿವಿಧೆಡೆಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು.
ಒಂದೆರೆಡು ಕಡೆಗಳಲ್ಲಿ ಎರಡು ಮೂರು ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದ ಆದರೆ ಈ ಬಾರಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, ಹೆಸರು ಮಾಡಬೇಕು ಎಂದು ಹೊರಟ ಈ ಯುವಕನಿಗೆ ಸಿಕ್ಕ ಮೊದಲ ಗೆಲವು ಇದಾಗಿದೆ.
ಕುಮಟಾದ ಗಿಬ್ ವೃತ್ತದ ಬಳಿ ಇರುವ ಮುನ್ಸಿಪಲ್ ವ್ಯಾಯಾಮ ಶಾಲೆ 50ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ 55 ಕೆಜಿ ತೂಕದ ಜಿಲ್ಲಾ ಮಟ್ಟದ
ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಫರ್ಧೆಯಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ 25 ಕ್ಕೂ ಹೆಚ್ಚು ಸ್ಫರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಮುಂಡಗೋಡದ ಯುವಕ ಸಚಿನ್ ಕೊರವರ ಮೊದಲ ಸ್ಥಾನ ಪಡೆದಿದ್ದಾನೆ. ಇದರಿಂದ ತಾಲೂಕಿನ ಕಿರ್ತಿ ಹೆಚ್ಚಿಸಿದ್ದು, ಆತನ ಸ್ನೇಹಿತರು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.