Friday, March 24, 2023

Latest Posts

ಖರ್ಗೆಯವರ ಪರಿಸ್ಥಿತಿ ನೋಡಿ ದುಃಖವಾಯ್ತು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಪರಿವಾರದ ವಿರುದ್ಧ ಹೋದರೆ ಅಪಮಾನ ಮಾಡುತ್ತಾರೆ. ಕರ್ನಾಟಕದ ರಾಜಕಾರಣಿಗಳನ್ನು ಅಪಮಾನಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದ ನಾಯಕರಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿತ್ತು.

ನಾನು ಇದೇ ಭೂಮಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೌರವಿಸುತ್ತೇನೆ. ನನಗೆ ಕೆಲವು ದಿನಗಳ ಹಿಂದೆ ಖರ್ಗೆಯವರ ಪರಿಸ್ಥಿತಿ ನೋಡಿ ದುಃಖವಾಯಿತು. ಛತ್ತೀಸ್ಗಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖರ್ಗೆಯವರಿಗೆ ಅಪಮಾನ ಮಾಡಲಾಗಿದೆ. ಕಾಂಗ್ರೆಸ್ ಅಧಿವೇಶನದ ವೇಳೆ ಬಿಸಿಲು ಇದ್ದರೂ ಖರ್ಗೆಯವರಿಗೆ ಕೊಡೆ ಹಿಡಿದಿರಲಿಲ್ಲ. ಎಐಸಿಸಿ ಅಧ್ಯಕ್ಷರಿಗೆ ಸೂಕ್ತ ನೆರಳಿನ ವ್ಯವಸ್ಥೆ ಮಾಡಿರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಬೇರೆ ನಾಯಕರಿಗೆ ಕೊಡೆ ಹಿಡಿದಿದ್ದರು. ಇದು ಎಐಸಿಸಿ ಅಧ್ಯಕ್ಷರಿಗೆ ಕಾಂಗ್ರೆಸ್ ಪಕ್ಷ ನೀಡುವ ಗೌರವ ಎಂದು ಮೋದಿ ಟೀಕಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಮಾತ್ರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅಧಿಕಾರದ ರಿಮೋಟ್ ಪರಿವಾರದ ಕೈಯಲ್ಲಿದೆ. ಇದನ್ನು ಮುಕ್ತ ಮಾಡಬೇಕಾಗಿರುವುದು ನಮ್ಮ ಗುರಿ ಎಂದು ಮೋದಿ ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್‌ ನಾಯಕರಿಗೆ ಎಷ್ಟು ನಿರಾಶೆ ಆಗಿದೆ ಅಂದರೆ, ಮೋದಿ ಬದುಕಿರುವವರೆಗೆ ಏನೂ ಮಾಡಲು ಆಗಲ್ಲವೆಂದು ಗೊತ್ತಾಗಿದೆ. ಮೋದಿ ಸಾಯಲಿ, ಮೋದಿ ಸಾಯಲಿ ಎಂದು ಬಯಸುತ್ತಿದ್ದಾರೆ. ನನಗೆ ಗುಂಡಿ ತೋಡುವುದರಲ್ಲಿ ಕೆಲವರು ವ್ಯಸ್ತರಾಗಿದ್ದಾರೆ. ಕೆಲವರು, ನಿಮ್ಮ ಶವ ಹೂಳಲು ಗುಂಡಿ ತೆಗೆಯುತ್ತಿದ್ದೇವೆ ಅಂತಿದ್ದಾರೆ. ಆದರೆ ದೇಶ ಜನ ಹೇಳುತ್ತಿದ್ದಾರೆ ನಿಮ್ಮ ಕಮಲ ಅರಳುತ್ತಿದೆ ಎಂಬುದಾಗಿ. ಸತ್ಯದ ಹಾದಿಯಲ್ಲಿ ಕೆಲಸ ಮಾಡಿದಾಗ ಯಾವುದೇ ತೊಂದರೆ ಆಗಲ್ಲ. ನೀವು ನೀಡಿದ ಪ್ರೀತಿ ವಿಶ್ವಾಸವನ್ನು ಬಡ್ಡಿ ಸಮೇತ ಹಿಂದಿರುಗಿಸುವೆ. ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ ಎಂದು ಮೋದಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!