ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ (ಎನ್.ಸಿ.ಎಸ್.ಕೆ.) ಅವಧಿಯನ್ನು 2022 ಮಾರ್ಚ್ 31ರಿಂದ ನಂತರ ಮೂರು ವರ್ಷಗಳ ಕಾಲ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ.
ಈ ಮೂರು ವರ್ಷಗಳ ವಿಸ್ತರಣೆಯಿಂದ ಆಗುವ ಒಟ್ಟು ಆರ್ಥಿಕ ಹೊರೆ ಅಂದಾಜು ₹ 43.68 ಕೋಟಿಗಳಾಗಿವೆ. ಮಾರ್ಚ್ 31ರಿಂದ ಮೂರು ವರ್ಷಗಳ ಕಾಲ ಎನ್.ಸಿ.ಎಸ್.ಕೆ.ಯ ವಿಸ್ತರಣೆಯ ಪ್ರಮುಖ ಫಲಾನುಭವಿಗಳು ದೇಶದ ಸಫಾಯಿ ಕರ್ಮಚಾರಿಗಳು ಮತ್ತು ಗುರುತಿಸಲಾದ ಕೈಯಿಂದ ಮಲ ಸ್ವಚ್ಛ ಮಾಡುವವರಾಗಿರುತ್ತಾರೆ. ಡಿಸೆಂಬರ್ 31ರ ಸಮೀಕ್ಷೆಯ ಪ್ರಕಾರ ಎಂ.ಎಸ್. ಕಾಯ್ದೆಯಡಿ ಗುರುತಿಸಲಾದ ಕೈಯಿಂದ ಮಲ ಸ್ವಚ್ಛ ಮಾಡುವವರ ಸಂಖ್ಯೆ 58,098 ಆಗಿದೆ.
ಎನ್.ಸಿ.ಎಸ್.ಕೆ.ಯನ್ನು 1993ರಲ್ಲಿ ಎನ್.ಸಿ.ಎಸ್.ಕೆ. ಕಾಯ್ದೆ 1993ರ ನಿಬಂಧನೆಗಳ ರೀತ್ಯ 31-03-1997ರವರೆಗಿನ ಅವಧಿಗಾಗಿ ಸ್ಥಾಪಿಸಲಾಯಿತು. ನಂತರ ಕಾಯ್ದೆಯ ಸಿಂಧುತ್ವವನ್ನು ಆರಂಭದಲ್ಲಿ 31-03-2002 ರವರೆಗೆ ಮತ್ತು ನಂತರ 29-02-2004ರವರೆಗೆ ವಿಸ್ತರಿಸಲಾಯಿತು. ಎನ್.ಸಿ.ಎಸ್.ಕೆ. ಕಾಯ್ದೆಯ ಅನುಷ್ಠಾನ 29-2-2004ರಿಂದ ಸ್ಥಗಿತಗೊಂಡಿತು. ಅದರ ನಂತರ ಎನ್.ಸಿ.ಎಸ್.ಕೆ.ಯ ಅಧಿಕಾರಾವಧಿಯನ್ನು ಕಾಲಕಾಲಕ್ಕೆ ನಿರ್ಣಯಗಳ ಮೂಲಕ ಶಾಸನನಾತ್ಮಕವಲ್ಲದ ಸಂಸ್ಥೆಯಾಗಿ ವಿಸ್ತರಿಸಲಾಗುತ್ತಿದೆ. ಪ್ರಸ್ತುತ ಆಯೋಗದ ಅವಧಿಯು 2022 ಮಾರ್ಚ್ 31ರವರೆಗೆ ಇತ್ತು.
ಆಯೋಗದ ಹಿನ್ನೆಲೆ
ಎನ್.ಸಿ.ಎಸ್.ಕೆ.ಯು ಸಫಾಯಿ ಕರ್ಮಚಾರಿಗಳ ನಿರ್ದಿಷ್ಟ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಶಿಫಾರಸುಗಳನ್ನು ಮಾಡುತ್ತದೆ. ಅದು ಸಫಾಯಿ ಕರ್ಮಚಾರಿಗಳಿಗೆ ಪ್ರಸ್ತುತ ಇರುವ ಕಾರ್ಯಕ್ರಮಗಳ ಮೌಲ್ಯಮಾಪನ ಮಾಡುವುದಲ್ಲದೆ, ಅವುಗಳ ಅಧ್ಯಯನವನ್ನೂ ನಡೆಸುತ್ತದೆ. ಜೊತೆಗೆ ನಿರ್ದಿಷ್ಟ ಕುಂದುಕೊರತೆ ಇತ್ಯಾದಿಗಳ ತನಿಖೆ ನಡೆಸುತ್ತದೆ. ಕೈಯಿಂದ ಮಲ ಸ್ವಚ್ಛ ಮಾಡುವುದಕ್ಕೆ ನೇಮಕ ಮಾಡುವುದಕ್ಕೆ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ 2013ರ ನಿಬಂಧನೆಗಳ ರೀತ್ಯ, ಎನ್.ಸಿ.ಎಸ್.ಕೆ.ಗೆ ಕಾಯ್ದೆಯ ಅನುಷ್ಠಾನ ಮತ್ತು ನಿಗಾ ವಹಿಸುವ ಹೊಣೆಯನ್ನು ವಹಿಸಲಾಗಿದೆ ಮತ್ತು ಅದರ ಯಶಸ್ವೀ ಅನುಷ್ಠಾನದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಲಹೆಯನ್ನು ಅದು ನೀಡಬಹುದಾಗಿದೆ. ಜೊತೆಗೆ ಕಾಯ್ದೆಯ ಉಲ್ಲಂಘನೆ ಮತ್ತು ಕಾಯ್ದೆಯ ನಿಬಂಧನೆಗಳ ಜಾರಿಗೊಳಿಸದಿರುವ ಬಗ್ಗೆ ದೂರುಗಳು ಬಂದರೆ ತನಿಖೆ ಮಾಡಬಹುದಾಗಿರುತ್ತದೆ.
ಸರಕಾರವು ಸಫಾಯಿ ಕರ್ಮಚಾರಿಗಳ ಸಬಲೀಕರಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆಯಾದರೂ ಸಾಮಾಜಿಕ – ಆರ್ಥಿಕ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರು ಇನ್ನೂ ಹಿಂದುಳಿದಿದ್ದು ಅದು ನಿವಾರಣೆಯಾಗಬೇಕಾಗಿದೆ. ಮಲಹೊರುವ ಪದ್ಧತಿಯನ್ನು ದೇಶದಲ್ಲಿ ಬಹುತೇಕ ನಿರ್ಮೂಲನೆ ಮಾಡಲಾಗಿದ್ದರೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಿವೆ.
ಮಲದ ಗುಂಡಿ/ಒಳಚರಂಡಿಯ ಸ್ವಚ್ಛತೆಯು ಅಪಾಯಕಾರಿಯಾಗಿದ್ದು, ಅದನ್ನು ಸಂಪೂರ್ಣ ತೊಡೆದು ಹಾಕುವುದು ಸರಕಾರಕ್ಕೆ ಗರಿಷ್ಠ ಆದ್ಯತೆಯ ವಿಷಯವಾಗಿದೆ. ಹೀಗಾಗಿ, ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಸರಕಾರದ ವಿವಿಧ ಉಪಕ್ರಮಗಳು ಮತ್ತು ಮಧ್ಯಸ್ಥಿಕೆಗಳ ಮೇಲೆ ನಿರಂತರ ನಿಗಾ ವಹಿಸುವುದು ಮತ್ತು ದೇಶದಲ್ಲಿ ಮಲವನ್ನು ಕೈಯಿಂದ ಸ್ವಚ್ಛ ಮಾಡುವ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿಯನ್ನು ಸಾಧಿಸಲು ನಿರಂತರ ನಿಗಾ ಆವಶ್ಯಕ ಎಂದು ಸರಕಾರ ಭಾವಿಸಿದೆ.