July 19, 2026
Sunday, July 19, 2026
spot_img

ಸೀತಾ ಮಾತೆ ಪಾತ್ರದ ಬಗ್ಗೆ ಭಾವುಕರಾದ ಸಾಯಿ ಪಲ್ಲವಿ: ಶೂಟಿಂಗ್ ಅನುಭವ ಹಂಚಿಕೊಂಡ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿರುವ, ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದ ‘ರಾಮಾಯಣ: ಭಾಗ 1’ ಬಿಗ್ ಬಜೆಟ್ ಚಿತ್ರದ ಪ್ರಚಾರ ಅಭಿಯಾನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಜುಲೈ 18ರ ಶನಿವಾರದಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪ್ರಥಮ ಸಂಕಲ್ಪ’ ಎಂಬ ವಿಶೇಷ ಸಮಾರಂಭದಲ್ಲಿ ಚಿತ್ರತಂಡದ ಜೊತೆಗೆ ಸಿನಿಮಾ ಹಾಗೂ ಆಧ್ಯಾತ್ಮಿಕ ವಲಯದ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.

ದೇವತೆಯ ಪಾತ್ರದ ಬಗ್ಗೆ ಸಾಯಿ ಪಲ್ಲವಿ ಮಾತು

ಈ ವೇದಿಕೆಯಲ್ಲಿ ಸೀತಾ ಮಾತೆಯಾಗಿ ನಟಿಸಿರುವ ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಅನುಭವ ಹಂಚಿಕೊಂಡು ಭಾವುಕರಾದರು. “ಕಲಾವಿದರಿಗೆ ಇಂತಹ ದೈವಿಕ ಪಾತ್ರಗಳು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಇಂತಹ ಪರಮ ಪವಿತ್ರ ಪಾತ್ರವನ್ನು ನಾನೇ ಹುಡುಕಿಕೊಂಡು ಬಂದೆ ಎಂದು ನನಗನಿಸುವುದಿಲ್ಲ. ಬದಲಿಗೆ, ಸೀತೆಯ ಪಾತ್ರ ಮಾಡಲು ನನಗೆ ಆಶೀರ್ವಾದ ಸಿಕ್ಕಿದೆ ಅಷ್ಟೇ. ಇದರ ಹಿಂದೆ ಇಡೀ ಚಿತ್ರತಂಡದ ಕಠಿಣ ಶ್ರಮ ಹಾಗೂ ಭಕ್ತಿ ಅಡಗಿದೆ” ಎಂದು ಅವರು ತಿಳಿಸಿದರು.

ಶೂಟಿಂಗ್ ಸೆಟ್‌ನಲ್ಲಿ ಧ್ಯಾನ ಮತ್ತು ಶುದ್ಧತೆ

ಚಿತ್ರೀಕರಣದ ದಿನಗಳನ್ನು ನೆನೆದ ನಟಿ, “ನಾನು ಶೂಟಿಂಗ್‌ಗೆ ಹೋಗುವ ಮುನ್ನ ದಿನವೂ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದೆ. ‘ಅಮ್ಮ ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ಈ ಚಿತ್ರಕ್ಕೆ ನನ್ನಿಂದ ಏನಾಗಬೇಕೋ ಅದನ್ನು ನೀನೇ ಮಾಡಿಸು’ ಎಂದು ಮನಸ್ಸಿನಲ್ಲೇ ಬೇಡಿಕೊಳ್ಳುತ್ತಿದ್ದೆ. ಈ ಪಾತ್ರಕ್ಕಾಗಿ ನನ್ನ ಯೋಚನೆಗಳನ್ನು ಅತ್ಯಂತ ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದು, ನನ್ನ ಜೀವನದ ಅತ್ಯುತ್ತಮ ನಟನೆಯನ್ನು ಪರದೆಯ ಮೇಲೆ ತರಲು ಶ್ರಮಿಸಿದ್ದೇನೆ” ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !