July 19, 2026
Sunday, July 19, 2026
spot_img

ಬೆಳಗಾವಿ ಕನ್ನಡಪರ ಠರಾವಿಗೆ ಸರ್ಕಾರದ ಗ್ರೀನ್ ಸಿಗ್ನಲ್! ಮುಂದಿನ ಪ್ರಕ್ರಿಯೆ ಆರಂಭ

ಹೊಸದಿಗಂತ ವರದಿ ​ಬೆಳಗಾವಿ:

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿವಿವಾದ ಪರಿಹಾರಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ’ ಎಂಬ ಠರಾವನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕೆಂಬ ಕನ್ನಡ ಸಂಘಟನೆಗಳ ದೀರ್ಘಕಾಲದ ಹೋರಾಟಕ್ಕೆ ಈಗ ಮಹತ್ವದ ತಿರುವು ದೊರೆತಿದೆ.

ಈ ಕುರಿತು ಸಲ್ಲಿಕೆಯಾಗಿದ್ದ ಮನವಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದೆ.

ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಆದೇಶ:

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ನೀಡಿದ್ದ ಮನವಿಯನ್ನು ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಜುಲೈ 18ರಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ರವಾನಿಸಿದ್ದರು. ಈ ಮಹತ್ವದ ಮನವಿಯನ್ನು CSO/004886/2026 ಸಂಖ್ಯೆಯಡಿ ದಾಖಲಿಸಿಕೊಂಡಿರುವ ಮುಖ್ಯ ಕಾರ್ಯದರ್ಶಿ ಕಚೇರಿಯು, ಮುಂದಿನ ಸಮಗ್ರ ಪರಿಶೀಲನೆ ಹಾಗೂ ಸೂಕ್ತ ಕ್ರಮಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳಿಗೆ ವರ್ಗಾಯಿಸಿದೆ.

ಪ್ರಮುಖ ನಿರ್ದೇಶನಗಳು:

ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಮನವಿಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಈ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಸರ್ಕಾರದ ‘ಜನಸ್ಪಂದನ-ಐಪಿಜಿಆರ್ಎಸ್’ ಪೋರ್ಟಲ್ನಲ್ಲಿ ದಾಖಲಿಸಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !