ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ನ್ಯಾಯಾಲಯದಲ್ಲಿ ಹಲವು ಸಾಕ್ಷ್ಯಗಳನ್ನು ಒಳಗೊಂಡ ಸುಮಾರು 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.
ಈ ಆರೋಪ ಪಟ್ಟಿಯಲ್ಲಿ ಬಂಧಿತ ಆರೋಪಿ ಶರೀಫುಲ್ ಇಸ್ಲಾಂ ವಿರುದ್ಧ ಪೊಲೀಸರು ಕಂಡುಕೊಂಡ ಹಲವು ಸಾಕ್ಷ್ಯಗಳು ಸೇರಿವೆ. ಈ ಚಾರ್ಚ್ ಶೀಟ್ 1,000 ಪುಟಗಳಿಗೂ ಹೆಚ್ಚು ಇವೆ. ಘಟನೆ ನಡೆದ ಸ್ಥಳದಲ್ಲಿ, ಸೈಫ್ ಅಲಿ ಖಾನ್ ದೇಹದಿಂದ ಮತ್ತು ಆರೋಪಿಯಿಂದ ದೊರೆತ ಚಾಕುವಿನ ತುಂಡುಗಳು ಒಂದೇ ಚಾಕುವಿನ 3 ತುಂಡುಗಳು ಎಂದು ಹೇಳುವ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಹ ಈ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ತನಿಖೆ ಸಮಯದಲ್ಲಿ ಪೊಲೀಸರು ಕಂಡುಕೊಂಡ ಆರೋಪಿಯ ಎಡಗೈಯ ಬೆರಳಚ್ಚು ವರದಿಯನ್ನು ಸಹ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 16ರಂದು, ಬಾಲಿವುಡ್ನಲ್ಲಿ ತಮ್ಮದೇ ಆದ ಸ್ಟಾರ್ಡಮ್ ಹೊಂದಿರುವ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ದಂಪತಿಯ ಬಾಂದ್ರಾ ನಿವಾಸದಲ್ಲಿ ದುರ್ಘಟನೆ ಸಂಭವಿಸಿತ್ತು. ದರೋಡೆಗೆ ಯತ್ನಿಸಿದ ಆರೋಪಿ, ಸೈಫ್ ಅವರ ಮೇಲೆ ದಾಳಿ ನಡೆಸಿದ್ದ. ಘಟನೆಯಲ್ಲಿ, ಪಟೌಡಿ ವಂಶಸ್ಥ ತೀವ್ರವಾಗಿ ಗಾಯಗೊಂಡರು. ದೇಹದಲ್ಲಿ ಸರಿಸುಮಾರು 6 ಗಂಭೀರ ಗಾಯಗಳಾಗಿದ್ದವು.
ನಟ ಆ ಕೂಡಲೇ ಲೀಲಾವತಿ ಆಸ್ಪತ್ರೆ ತಲುಪಿದರು. 5 ದಿನಗಳ ಕಾಲ ಚಿಕಿತ್ಸೆ ಪಡೆದು ಜನವರಿ 21ರಂದು ಡಿಸ್ಚಾರ್ಜ್ ಆದರು. ನಂತರ, ಆರೋಪಿ ಶರೀಫುಲ್ ಇಸ್ಲಾಂ ಅರೆಸ್ಟ್ ಆಗಿ ತನಿಖೆ ಸಾಗಿದೆ. ಬಾಂಗ್ಲಾದೇಶದಿಂದ ಭಾರತ ಪ್ರವೇಶಿಸಿ, ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ತಂಗಿದ್ದ. ಅಂತಿಮವಾಗಿ ಮುಂಬೈ ತೆರಳಿ, ಈ ಘಟನೆ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.