ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳುಳ್ಳಿ ದರ ಜಾಸ್ತಿ ಆಗಿರುವುದನ್ನು ಗಮನಿಸಿದ ಕೆಲ ಬೆಳ್ಳುಳ್ಳಿ ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕ ಎನ್ನಲಾದ ಈ ಚೀನಾದ ಬೆಳ್ಳುಳ್ಳಿಯ ಮಾರಾಟ ಶಿವಮೊಗ್ಗದ ಗಾಂಧಿಬಜಾರ್ ಮಾರುಕಟ್ಟೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಮಾರಾಟ ಆಗುತ್ತಿದೆ ಎನ್ನಲಾಗಿದೆ.
ಶಿವಮೊಗ್ಗ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಎಂಟ್ರಿ ಕೊಟ್ಟಾಗಿನಿಂದ ದೇಶಿ ಬೆಳ್ಳುಳ್ಳಿಗೆ ಬೇಡಿಕೆ ಕಡಿಮೆಯಾಗಿದೆ. ನಿಷೇಧಿತ ಬೆಳ್ಳುಳ್ಳಿ ಎನ್ನುವುದು ಗೊತ್ತಿಲ್ಲದೇ ಗ್ರಾಹಕರು ಕಡಿಮೆ ದರದಲ್ಲಿ ಸಿಗುವ ಚೀನಾ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ.
ಈಗಾಗಲೇ ಸರಕಾರವು ಚೀನಾ ದೇಶ ಮತ್ತು ರಾಜ್ಯದಲ್ಲಿ ಚೀನಾ ಬೆಳ್ಳುಳ್ಳಿ ಬಳಕೆಗೆ ನಿಷೇಧ ಹೇರಿದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡುತ್ತಾರೆ. ಬೆಳ್ಳುಳ್ಳಿ ಸಂಸ್ಕರಣೆಗೂ ಬಳಷ್ಟು ರಾಸಾಯನಿಕ ಉಪಯೋಗಿಸುತ್ತಾರೆ. ಅವುಗಳ ಸೇವನೆಯಿಂದ ಹೊಟ್ಟೆ ಹುಣ್ಣು, ಸೋಂಕು ಇತ್ಯಾದಿ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ಮೂತ್ರಪಿಂಡಗಳ ಆರೋಗ್ಯದ ಮೇಲೂ ಚೀನಾ ಬೆಳ್ಳುಳ್ಳಿ ಅಡ್ಡ ಪರಿಣಾಮ ಬೀರುತ್ತದೆ. ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದೆಯೇ ಚೀನಾ ಬೆಳ್ಳುಳ್ಳಿ ನಿಷೇಧಿಸಲಾಗಿದೆ.