ಜನವರಿ 22 ರಂದು ಕೋಲ್ಕತ್ತಾದಲ್ಲಿ ‘ಸಾಮರಸ್ಯ ರ್ಯಾಲಿ’: ಸಿಎಂ ಮಮತಾ ಬ್ಯಾನರ್ಜಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಬಾಕಿ ಉಳಿದಿದ್ದು,ಈ ವೇಳೆ ಜನವರಿ 22 ರಂದು ಕೋಲ್ಕತ್ತಾದಲ್ಲಿ ಎಲ್ಲಾ ಧರ್ಮಗಳ ಜನರೊಂದಿಗೆ ‘ಸಾಮರಸ್ಯ ರ್ಯಾಲಿ’ ನಡೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಘೋಷಿಸಿದ್ದಾರೆ.

ಆಡಳಿತಾರೂಢ ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್ ದೇವಸ್ಥಾನದಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲಿಸಿದ ನಂತರ ದಕ್ಷಿಣ ಕೋಲ್ಕತ್ತಾದ ಹಜ್ರಾ ಕ್ರಾಸಿಂಗ್ನಿಂದ ‘ಸಾಮರಸ್ಯ ರ್ಯಾಲಿ’ ಪ್ರಾರಂಭಿಸಲಿದ್ದಾರೆ.

ಜನವರಿ 22 ರಂದು ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ. ನಂತರ ಎಲ್ಲ ಧರ್ಮದವರೊಂದಿಗೆ ಸೌಹಾರ್ದ ಸಮಾವೇಶದಲ್ಲಿ ಪಾಲ್ಗೊಳ್ಳುತ್ತೇನೆ. ಇದಕ್ಕೂ ಬೇರೆ ಯಾವುದೇ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಟಿಎಂಸಿ ಆಯೋಜಿಸಲಿರುವ ಈ ರ್ಯಾಲಿ, ಪಾರ್ಕ್ ಸರ್ಕಸ್ ಮೈದಾನದಲ್ಲಿ ಮುಕ್ತಾಯಗೊಳ್ಳುವ ಮುನ್ನ ಮಸೀದಿಗಳು, ಚರ್ಚ್ಗಳು ಮತ್ತು ಗುರುದ್ವಾರಗಳು ಸೇರಿದಂತೆ ವಿವಿಧ ಧರ್ಮಗಳ ಪೂಜಾ ಸ್ಥಳಗಳಿಗೆ ಭೇಟಿ ನೀಡಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರ್ಯಾಲಿಗಳನ್ನು ಆಯೋಜಿಸುವಂತೆ ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ‘ಪ್ರಾಣ ಪ್ರತಿಷ್ಠಾಪನೆ’ ಅಥವಾ ಪಟ್ಟಾಭಿಷೇಕ ರಾಜಕಾರಣಿಗಳ ಕೆಲಸವಲ್ಲ. ಅದು ಪುರೋಹಿತರ ಕೆಲಸ. ಮೂಲಸೌಕರ್ಯ ಕಲ್ಪಿಸುವುದು ನಮ್ಮ ಕೆಲಸ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!