ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 40 ವರ್ಷಗಳಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್‌ನಲ್ಲಿ ಸಮೋಸ ಮಾರಿ ಜೀವನ ನಡೆಸುತ್ತಿದ್ದ ವಿದ್ಯಾರ್ಥಿಗಳ ಪಾಲಿನ ‘ಸಮೋಸ ಅಜ್ಜ’ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ ಮದುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ (84) ಯವರು ಸಮೋಸ ಅಜ್ಜರೆಂದೇ ಪ್ರಖ್ಯಾತರಾಗಿದ್ದರು.
40 ವರ್ಷಗಳ ಹಿಂದೆ ಅಳಿಯನೊಂದಿಗೆ ಮಂಗಳೂರಿಗೆ ಬಂದಿದ್ದ ಇವರು ಅಲೋಶಿಯಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು ಸಮೋಸ ಜೊತೆಗೆ ಚಿಕ್ಕಿ, ನೆಲಗಡಲೆ, ಜಿಲೇಬಿ, ಬರ್ಫಿಗಳನ್ನೂ ಮಾರುತ್ತಿದ್ದರು.
ಮಂಗಳೂರಿನ ಕಾವೂರಿನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ‘ಸಮೋಸ ಅಜ್ಜ’ರಿಗೆ ನಾಲ್ವರು ಪುತ್ರಿಯರಿದ್ದು, ಓರ್ವ ಪುತ್ರನಿದ್ದು, ಅವರು ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.
ಅಣ್ಣಾ ಹಜಾರೆಯವರನ್ನು ಇವರು ಹೋಲುತ್ತಿದ್ದರಿಂದ, ವಿದ್ಯಾರ್ಥಿಗಳು ಇವರನ್ನು ಅಣ್ಣ ಅಜ್ಜ ಎಂದೂ ಕರೆಯುತ್ತಿದ್ದರು. ಇವರು ಹಾಕುವ ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬ ಮತ್ತು ಹಾಸ್ಯ ಮನೋಭಾವದಿಂದ ಜನಪ್ರಿಯತೆಯನ್ನು ಪಡೆದಿದ್ದರು.