ಕೊನೆಗೂ ಸೆರೆಯಾಯಿತು ದಾವಣಗೆರೆ ಜನರ ನಿದ್ದೆಗೆಡಿಸಿದ ಕಾಡಾನೆ!

ಹೊಸದಿಗಂತ ವರದಿ,ದಾವಣಗೆರೆ:

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಹಾವಳಿ ಎಬ್ಬಿಸಿದ್ದ ಕಾಡಾನೆ ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಹಾಸನದ ಅರಸೀಕೆರೆ, ಶಿವನಿ, ಹೊಳಲ್ಕೆರೆ ಮಾರ್ಗವಾಗಿ ಚನ್ನಗಿರಿ ತಾಲೂಕನ್ನು ಪ್ರವೇಶಿಸಿದ್ದ ಒಂಟಿ ಸಲಗವು ಸುತ್ತಮುತ್ತಲಿನ ಗ್ರಾಮಗಳಲ್ಲಿ ತನ್ನ ರೌದ್ರಾವತಾರ ತೋರಿತ್ತು. ಓರ್ವ ಬಾಲಕಿಯ ಸಾವಿಗೆ ಕಾರಣವಾಗಿ ಮೂವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಶಾಂತಿಸಾಗರ ಕೆರೆಯ ಅರಣ್ಯ ಪ್ರದೇಶದಲ್ಲಿದ್ದ ಕಾಡಾನೆಯು ಹೊನ್ನಾಳಿ , ನ್ಯಾಮತಿ ಮೂಲಕ ಶಿಕಾರಿಪುರದತ್ತ ಹೋಗುವ ಸಾಧ್ಯತೆ ಇತ್ತು. ಇದೀಗ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆ ಕೈಗೊಂಡು, ಹೊನ್ನಾಳಿ ತಾಲೂಕು ಜೀನಹಳ್ಳಿಯ ಸಮೀಪ ಮಂಗಳವಾರ ಕಾಡಾನೆಯನ್ನು ಖೆಡ್ಡಾಗೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆಗಾಗಿ ಹುಡುಕಾಟ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ತಜ್ಞರು ಆನೆಯ ಇರುವಿಕೆಯನ್ನು ಪತ್ತೆ ಮಾಡಿದ್ದರು. ಡ್ರೋಣ್ ಮೂಲಕ ಆನೆಯನ್ನು ಸೈಟ್ ಮಾಡಿ, ಅದಕ್ಕೆ ಅರವಳಿಕೆ ಚುಚ್ಚುಮದ್ದು ಕೊಡಲು ಮುಂದಾಗಿದ್ದರು. ಈ ಮಧ್ಯೆ ಕಾಡಾನೆ ಸೆರೆ ಹಿಡಿಯುವ ಆಪರೇಷನ್ನಲ್ಲಿ ಮುಂಚೂಣಿಯಲ್ಲಿದ್ದ ಡಾ.ವಿನಯ್ ಮೇಲೆ ಕಾಡಾನೆಯು ದಾಳಿ ನಡೆಸಿತ್ತು. ಅರವಳಿಕೆ ಚುಚ್ಚುಮದ್ದು ಕೊಟ್ಟ ಬೆನ್ನಲ್ಲೆ ಆನೆಯು ಏಕಾಏಕಿ ದಾಳಿ ನಡೆಸಿ ವಿನಯ್ರ ಮೇಲೆ ಕಾಲಿಟ್ಟಿತ್ತು. ಘಟನೆಯಲ್ಲಿ ವಿನಯ್ ಗಂಭೀರವಾಗಿ ಗಾಯಗೊಂಡಿದ್ದರು.
ಆನಂತರವೂ ಕರ‍್ಯಾಚರಣೆ ಮುಂದುವರೆದಿದ್ದು, ನಾಗರಹೊಳೆ, ಮೈಸೂರಿನಿಂದ ಬಂದಿದ್ದ ತಜ್ಞರು, ಆನೆಗೆ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಸಕ್ರೆಬೈಲ್ ಆನೆ ಬಿಡಾರದಿಂದ ತೆರಳಿದ್ದ ಭಾನುಮತಿ, ಬಹದ್ದೂರ್, ಸಾಗರ್, ಸೋಮಣ್ಣ, ಬಾಲಣ್ಣ ಎಂಬ ಸಾಕು ಆನೆಗಳ ಸಹಾಯದಿಂದ ಮಾವುತರು ಕಾಡಾನೆಯನ್ನು ಹಗ್ಗಗಳಿಂದ ಬಿಗಿದು ಕಟ್ಟಿ ಸೆರೆ ಹಿಡಿದಿದ್ದಾರೆ.
ಆನೆಗೆ ಪ್ರಜ್ಞೆ ಬರುವ ಹೊತ್ತಿಗೆ ಕಾಡಾನೆಯು ಸಕ್ರೆಬೈಲ್ ಆನೆಗಳ ನಡುವೆ ಬಂಧನಕ್ಕೊಳಗಾಗಿತ್ತು. ಆನೆಯನ್ನು ಕಾಡಿಗೆ ಬಿಡುವುದೋ ಅಥವಾ ಬಿಡಾರದಲ್ಲಿ ತರಬೇತುಗೊಳಿಸುವುದೋ ಎಂಬ ಬಗ್ಗೆ ಇನ್ನಷ್ಟೆ ನಿರ್ಧಾರ ಆಗಬೇಕಿದೆ. ದಾವಣಗೆರೆ, ಭದ್ರಾವತಿ, ಶಿವಮೊಗ್ಗ‌, ಹೊನ್ನಾಳಿ, ಚನ್ನಗಿರಿ, ನ್ಯಾಮತಿ‌ಭಾಗದ 200ಕ್ಕೂ ಅಧಿಕ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ದಾಂಧಲೆ ಎಬ್ಬಿಸಿ ಆತಂಕಕ್ಕಿಡು ಮಾಡಿದ್ದ ಕಾಡಾನೆಯನ್ನು ಸೆರೆ ಹಿಡಿದಿದ್ದಕ್ಕೆ ಈ ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!