ಹೊಸ ದಿಗಂತ ವರದಿ, ಶಿವಮೊಗ್ಗ:
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಶಿರಾಳಕೊಪ್ಪ ಪೊಲೀಸರು 60 ಸಾವಿರ ಮೌಲ್ಯದ ಶ್ರೀಗಂಧ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕಾರಿಪುರ ತಾಲೂಕು ಚಿಕ್ಕಜಂಬೂರು ಗ್ರಾಮದ ಮುಷ್ತಾಕ್ ಅಹಮ್ಮದ್ (38)ಮತ್ತು ಫೀರ್ ಖಾನ್ (43) ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಚಿಕ್ಕಜಂಬೂರು ಗ್ರಾಮದ ಕಡೆಯಿಂದ ಶಿರಾಳಕೊಪ್ಪದ ಕಡೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಶಿಕಾರಿಪುರ ಡಿವೈಎಸ್ಪಿ ಅವರಿಗೆ ಮಾಹಿತಿ ಬಂದಿತ್ತು.
ದಾಳಿ ನಡೆಸಿ ಕ್ರಮ ಕೈಗೊಳ್ಳಲು ಶಿರಾಳಕೊಪ್ಪ ಪಿಎಸ್ಐಗೆ ಸೂಚಿಸಿದ ಮೇರೆಗೆ ಪಿಎಸ್ಐ ಮತ್ತು ಸಿಬ್ಬಂದಿ ಚಿಕ್ಕಜಂಬೂರು ಮತ್ತು ಕೋಡಿಕೊಪ್ಪ ಗ್ರಾಮದ ನಡುವೆ ಇರುವ ಸೇತುವೆಯ ಹತ್ತಿರ ದಾಳಿ ನಡೆಸಿದರು.
ಬಂಧಿತರಿಂದ 60,000 ರೂ. ಮೌಲ್ಯದ ಒಟ್ಟು 17 ಕೆ.ಜಿ 660 ಗ್ರಾಂ ತೂಕದ ಶ್ರೀಗಂಧದ ತುಂಡುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.