ಮುಂಡಗೋಡದಲ್ಲಿ ಹೆಚ್ಚಿದ ಶ್ರೀಗಂಧ ಮರಗಳ್ಳರ ಹಾವಳಿ, ಮತ್ತೆರಡು ಮರ ಕಡಿದು ಪರಾರಿ

ಹೊಸದಿಗಂತ ವರದಿ ಮುಂಡಗೋಡ:

ಪಟ್ಟಣದ ದೇಶಪಾಂಡೆ ನಗರದಲ್ಲಿ ಮತ್ತೆ ಎರಡು ಗಂಧದ ಮರ ಕಡಿದು ಪರಾರಿಯಾದ ಘಟನೆ ಜರುಗಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುವ ಪ್ರಕರಣ ಹೆಚ್ಚಾಗುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚುವ ಸವಾಲು ಎದುರಾಗಿದೆ.

ಬೆಲೆ ಬಾಳುವ ಶ್ರೀಗಂಧದ ಮರಗಳ್ಳರ ಹಾವಳಿ ತಾಲೂಕಿನ ಹೆಚ್ಚಾಗಿದ್ದು ತಡರಾತ್ರಿ ಮರ ಕಡಿದು ಸಾಗಿಸುತ್ತಿದ್ದಾರೆ. ಮಮ್ಮದ ಹಜರತ್ ಎಂಬುವರ ತೋಟದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಕಡಿದಿದ್ದಾರೆ. ಇವರು ಮೂರ‍್ನಾಲ್ಕು ದಿನಗಳಿಂದ ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಇದನ್ನು ಗಮನಿಸಿದ ಕಿಡಿಗೇಡಿಗಳು 10 ವರ್ಷದ ಎರಡು ಶ್ರೀಗಂಧದ ಮರ ಕತ್ತರಿಸಿಕೊಂಡು ಹೋಗಿದ್ದಾರೆ.

ಮಮ್ಮದ ಅವರು ತೋಟಕ್ಕೆ ಹೋಗಿ ನೋಡಿದಾಗ ಮರ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಳೆದ ಶುಕ್ರವಾರ ತಡರಾತ್ರಿ ತಾಲೂಕು ಆಸ್ಪತ್ರೆಯ ತಾಲೂಕು ಆರೋಗ್ಯಧಿಕಾರಿಯ ಕಾರ್ಯಾಲಯ ಹಾಗೂ ವಸತಿ ಗೃಹದ ಕಂಪೌಂಡ್ ಒಳಗಿದ್ದ ಎರಡು ಮರಗಳನ್ನು ಕತ್ತರಿಸಿದ್ದರು. ಖದೀಮರು ಮಧ್ಯ ಭಾಗದ ಗಂಧದ ತುಂಡು ಮಾತ್ರ ಸಾಗಿಸಿ ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ.

ತಾಲೂಕಿನಲ್ಲಿ ಇತ್ತೀಚೆಗೆ ಮರಗಳ್ಳರ ಕೈಚಳಕ ನಡೆಯುತ್ತಿರುವುದು ಜನರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!