ಹಲವು ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಸ್ಪರ್ಧೆ: ಪ್ರಸನ್ನ ಎನ್.ಗೌಡ

ಹೊಸದಿಗಂತ ವರದಿ, ಮೈಸೂರು:

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಸ್ಪರ್ಧಿಸಲು ತೀರ್ಮಾನಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ, ಉತ್ತರ ಕನ್ನಡ ಮತ್ತು ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ರೈತ ಸಂಘದ ಮುಖಂಡರು ಚಿಂತನೆ ನಡೆಸಿದ್ದು, ಈ ಸಂಬoಧ ಗುರುವಾರ ನಡೆದ ಕಾರ್ಯಕಾರಣಿಯಲ್ಲಿ ಇದಕ್ಕೆ ಸಮ್ಮತಿ ನೀಡಲಾಗಿದೆ. ಸದ್ಯದಲ್ಲಿಯೇ ಪಕ್ಷ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರನ್ನು ಕಣಕ್ಕೆ ಇಳಿಸಲು ಚಿಂತಿಸಲಾಗಿತ್ತು. ಆದರೆ ಯಾವುದೇ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗದ ಕಾರಣದಿಂದ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರಲು ತೀರ್ಮಾನಿಸಲಾಗಿದೆ. ಹಾಗಾಗಿ ಬಡಗಲಪುರ ನಾಗೇಂದ್ರ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, 2024ರ ಲೋಕಸಭಾ ಚುನಾವಣೆ ರೈತರು, ಕಾರ್ಮಿಕರು ಮತ್ತು ದುಡಿಯುವ ವರ್ಗಕ್ಕೆ ಬಹಳ ಮುಖ್ಯವಾದ ಚುನಾವಣೆಯಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಬಹಳ ಮುಖ್ಯವಾಗಿದೆ. ಈ ಬಾರಿ ಬಿಜೆಪಿ ಮತ್ತು ಮೈತ್ರಿಕೂಟ ಪಕ್ಷಗಳ ವಿರುದ್ಧ ಹೋರಾಟವನ್ನ ಮಾಡುತ್ತೇವೆ. ಬಿಜೆಪಿ ಮೈತ್ರಿಕೂಟ ಸೋಲಿಸಿ ರೈತ ಸಮುದಾಯವನ್ನು ಉಳಿಸಿ ಎಂದು ಅಭಿಯಾನವನ್ನ ಆರಂಭಿಸುತ್ತೇವೆ. ರಾಜ್ಯಾದ್ಯಂತ 1 ಕೋಟಿ ಕರ ಪತ್ರಗಳನ್ನ ಹಂಚಿ ಎನ್ ಡಿಎ ವಿರುದ್ಧ ಕ್ಯಾಂಪೇನ್ ಮಾಡುತ್ತೇವೆ. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಕೂಡ ಬಿಜೆಪಿ ವಿರುದ್ಧ ಅಭಿಯಾನ ಮಾಡುತ್ತೇವೆ. ಭಾರತದ ಪ್ರಜಾಪ್ರಭುತ್ವ ಉಳಿವಿಗಾಗಿ ಬಿಜೆಪಿಯನ್ನ ಸೋಲಿಸಬೇಕಾಗಿದೆ. ರೈತ ವಿರೋಧಿ, ಕಾರ್ಮಿಕ ವಿರೋಧ, ದುಡಿಯುವ ವರ್ಗದ ವಿರೋಧಿ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.

ನಾವು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆಯೇ ಹೊರತು ನಾವು ಇಂತಹದ್ದೇ ಪಕ್ಷಕ್ಕೆ ಮತ ಹಾಕಿ ಅಂತ ಎಲ್ಲೂ ಹೇಳಲ್ಲ. ಮತದಾನ ಎಲ್ಲರೂ ಮಾಡಿ ಸೂಕ್ತ ಅಭ್ಯರ್ಥಿಗಳಿಗೆ ಮತಹಾಕಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಮರಂಕಯ್ಯ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!