ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿದ್ದ ವೇಳೆ ರಾಜಾತಿಥ್ಯ ಪಡೆದ ಆರೋಪ ಎದುರಿಸುತ್ತಿದ್ದ ತಮಿಳುನಾಡಿನ ಶಶಿಕಲಾ ಸೇರಿ ನಾಲ್ವರಿಗೆ ಎಸಿಬಿ ನ್ಯಾಯಾಲಯ ಜಾಮೀನು ನೀಡಿದೆ.
ಶಶಿಕಲಾ ಹಾಗೂ ಸಂಬಂಧಿ ಇಳವರಸಿ ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಪರಪ್ಪನ ಆಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಕಳೆದ ವರ್ಷ ಬಿಡುಗಡೆಯಾಗಿದ್ದರು.
ಇನ್ನು ರಾಜಾತಿಥ್ಯ ಪಡೆದ ಆರೋಪ ವಿಚಾರವಾಗಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರಿದ್ದ ಏಕಸದಸ್ಯ ಸಮಿತಿ ನೇಮಿಸಿ ವರದಿ ನೀಡಲು ಸರ್ಕಾರ ಸೂಚಿಸಿತ್ತು. ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಣ ನೀಡಿರುವುದರಿಂದ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ವಿನಯ್ ಕುಮಾರ್ ಸಮಿತಿ ವರದಿ ನೀಡಿತ್ತು.
ಬಳಿಕ ಸರ್ಕಾರದ ಅನುಮತಿ ಪಡೆದ ಎಸಿಬಿಯು ಶಶಿಕಲಾ, ಇಳವರಸಿ ಮತ್ತು ಜೈಲು ಸಿಬ್ಬಂದಿಯಾದ ಗಜರಾಜು, ಸುರೇಶ್ ಹಾಗೂ ಇಬ್ಬರು ಅಧಿಕಾರಿಗಳು ಸೇರಿ ಆರು ಜನರ ವಿರುದ್ದ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಎಸಿಬಿ ಕೋರ್ಟ್ಗೆ ಹಾಜರಾಗಿದ್ದರು.
ಇದೀಗ ನಾಲ್ವರು ಆರೋಪಿಗಳಿಗೂ ಐದು ಲಕ್ಷ ಬಾಂಡ್ ಪಡೆದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ಏ.16ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.