ಹೊಸದಿಗಂತ ವರದಿ,ಶ್ರೀರಂಗಪಟ್ಟಣ :
ಶ್ರೀರಂಗಪಟ್ಟಣದ ಗಂಜಾಂನ ಪ್ರಸಿದ್ದ ಶ್ರೀ ನಿಮಿಷಾಂಬ ದೇವಾಲಯಕ್ಕೆ ತಮಿಳುನಾಡಿನ ಶಶಿಕಲಾ ನಟರಾಜನ್ ಭೇಟಿ ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಹರಿಕೆ ತೀರಿಸಿದರು.
ಶುಕ್ರವಾರ ಸಂಜೆ ತಮ್ಮ ಆಪ್ತರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ತಮಿಳುನಾಡು ಮಾಜಿ ಮುಖ್ಯ ಮಂತ್ರಿ ದಿ. ಜಯಲಲಿತ ಅವರ ಆಪ್ತೆಯಾಗಿದ್ದ ಶಶಿಕಲಾ ನಟರಾಜನ್ ಸುಮಾರು 30 ಮಂದಿ ಅಪ್ತರೊಂದಿಗೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹಲವು ಸಮಸ್ಯೆಗಳಲ್ಲಿ ಸಿಲುಕಿಹಾಕಿಕೊಂಡಿದ್ದ ವೇಳೆ ಶ್ರೀ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತಿಕೊಂಡಿದ್ದರು. ಅದರಂತೆ ಇದೀಗ ಜೈಲುವಾಸ ಮುಗಿಸಿ ಮೊದಲು ದೇವಾಲಯಕ್ಕೆ ತಮ್ಮ ಕುಟುಂಬದವರೊಂದಿಗೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದೇವಿ ಹರಿಕೆ ತೀರಿಸುತ್ತಿರುವುದಾಗಿ ಅವರ ಆಪ್ತರೊಬ್ಬರು ತಿಳಿಸಿದರು.
ದೇವಾಲಯದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರೂ ಆದ ಸೂರ್ಯನಾರಾಯಣ್ ಭಟ್ ಅವರು ಶಶಿಕಲಾ ಅವರನ್ನು ಬರಮಾಡಿಕೊಂಡು ದೇವಿಗೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.
ನಂತರ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೂ ಸಹ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.