ಹೊಸದಿಗಂತ ವರದಿ ಯಲ್ಲಾಪುರ :
ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ದೇಶ ರಕ್ಷಿಸುವ ಕಾಳಜಿ ಕಳಕಳಿ ಇದ್ದರೆ ಮೊದಲು ಮಾಧ್ಯಮ ಕ್ಷೇತ್ರವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಿರಿಯ ಉದ್ಯಮಿ, ಪತ್ರಿಕೋದ್ಯಮಿ ಡಾ. ವಿಜಯ ಸಂಕೇಶ್ವರ ಮನವಿ ಮಾಡಿದರು.
ಯಲ್ಲಾಪುರದ ವಿಶ್ವದರ್ಶನ ಎಜ್ಯುಕೇಶನ್ ಸೊಸೈಟಿ ಆರಂಭಿಸಿರುವ ಡಾ. ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದಲ್ಲಿ ಇಂದು ಉತ್ತಮ ಮಾಧ್ಯಮ ಸಂಸ್ಥೆಗಳು ಸತ್ತು ಹೋಗಲು ಕಾರಣ ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಮಾಧ್ಯಮ ಕ್ಷೇತ್ರದ ಕುರಿತಾಗಿ ಇರುವ ತಾತ್ಸಾರ, ಅನಾದರ ಕಾರಣ. ಇದು ಈಗಿರುವ ಸರ್ಕಾರದಲ್ಲೂ ಮುಂದುವರೆದಿದೆ. ಪ್ರಾಮಾಣಿಕ ಮಾಧ್ಯಮಗಳು ಈಗಿನ ನೀತಿಗೆ ಒಗ್ಗಿ ಬದುಕುವುದು ಕಷ್ಟವಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾಧ್ಯಮಗಳಿಂದ ಪ್ರಚಾರ ಬೇಕು, ಆದರೆ ಅವನ್ನು ಉಳಿಸಲು ಬೇಕಾದ ಬದ್ಧತೆ ಇರದಿರುವುದು ನೋವಿನ ಸಂಗತಿ ಎಂದವರು ವಿಷಾದಿಸಿದರು.
ಎಡಪಂಥೀಯರಿಗೆ, ಕುಲಗೆಟ್ಟವರಿಗೆ ಹಣ ಎಲ್ಲಿಂದಾದರೂ ಬರುತ್ತೆ. ಆದರೆ ಪ್ರಾಮಾಣಿಕವಾಗಿ ಪತ್ರಿಕೆ ನಡೆಸಲು ಹೊರಟವರು ಏನು ಮಾಡಬೇಕು ಎಂದವರು ಪ್ರಶ್ನಿಸಿದರು. ಟಿವಿ ಕ್ಷೇತ್ರದಲ್ಲೂ ರೇಟಿಂಗ್ ಏಜೆನ್ಸಿಯ ಭ್ರಷ್ಟಾಚಾರದಿಂದ ಉತ್ತಮ ಮಾಧ್ಯಮಗಳು ಮುಚ್ಚಿಹೋಗುತ್ತಿವೆ. ಈ ಬಗ್ಗೆ ಆಳುವವರಿಗೆ ಕಾಳಜಿ ಇಲ್ಲ ಎಂದರು. ಪತ್ರಿಕೆ ನಡೆಸುವುದು ಬಹಳ ಕಷ್ಟ. ಕೇಂದ್ರ ಸರ್ಕಾರಕ್ಕೂ ಯಾವುದರ ಮೇಲೆ ತೆರಿಗೆ ಹಾಕಬೇಕು, ಹಾಕಬಾರದು ಎನ್ನುವ ಸಾಮಾನ್ಯ ಜ್ಞಾನ ಇರಬೇಕು. ಮುದ್ರಣ ಕ್ಷೇತ್ರಕ್ಕೂ ಜಿ.ಎಸ್.ಟಿ ಹಾಕಿದರೆ ಬದುಕುವುದು ಹೇಗೆ. ಸಚಿವ ಪ್ರಹ್ಲಾದ ಜೋಶಿ ಬಳಿ ಹಲವಾರು ಬಾರಿ ಈ ಬಗ್ಗೆ ಮನವಿ ಮಾಡಿದ್ದೇನೆ. ಈಗಲಾದರೂ ಈ ಬಗ್ಗೆ ಗಂಭೀರ ಯೋಚನೆ ಮಾಡಲಿ ಎಂದರು.
ಮಾಧ್ಯಮ ಶಾಲೆಯನ್ನು ದೀಪ ಬೆಳಗಿಸುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ಕರ್ನಾಟಕ ವಿ.ವಿ.ಯ ಕುಲಪತಿ ಡಾ.ಕೆ.ಬಿ.ಗುಡಸಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉದ್ಯಮಿ ಎಸ್.ಎಚ್.ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ,ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಪ್ರಾಚಾರ್ಯ ನಾಗರಾಜ ಇಳೆಗುಂಡಿ ಮಿಡಿಯಾ ಸ್ಕೂಲ್ ಪರಿಚಯಿಸಿದರು.