ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ ಚೆನ್ನಾಗಿರಬೇಕು…ಕಾಂತಿಯುತವಾಗಿರಬೇಕು ಎಂಬುದು ಯಾರಿಗಿಲ್ಲ ಹೇಳಿ. ಪ್ರತಿಯೊಬ್ಬರೂ ತಮ್ಮ ಮುಖ ಫಳ ಫಳನೆ ಹೊಳೆಯುತ್ತಾ ಇತರರನ್ನು ಆಕರ್ಷಿಸುವಂತಿರಬೇಕೆಂದು ಪ್ರಯತ್ನ ಪಡುತ್ತಲೇ ಇರುತ್ತಾರೆ. ಇದಕ್ಕಾಗಿ ಪಾರ್ಲರ್, ಮಸಾಜ್ ಹೀಗೆ ಅನೇಕ ವಿಚಾರಗಳಿಗೆ ಮೊರೆ ಹೋಗುತ್ತಿರುತ್ತಾರೆ.
ಇನ್ನು ಹಣ ಖರ್ಚು ಮಾಡುವುದನ್ನು ಬಿಟ್ಟು ಬಿಡಿ ಮನೆಯಲ್ಲಿಯೇ ಇದ್ದು ನಿಮ್ಮ ಮುಖಾರವಿಂದ ವೃದ್ಧಿ ಮಾಡಿಕೊಳ್ಳಿ. ಅನಾದಿ ಕಾಲದಿಂದಲೂ, ಭಾರತೀಯ ಚಿಕಿತ್ಸಾ ಪದ್ದತಿಯಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವನ್ನು ನೀಡಲಾಗಿದೆ. ಉತ್ತಮ ಆರೋಗ್ಯ ವರ್ಧನೆಯ ಸಾಧನವಾಗಿದೆ ಈ ಜೇನು.
ಶುದ್ಧ ಜೇನು ಹಲವು ರೋಗಗಳನ್ನು ಶಮನ ಮಾಡುವ ಗುಣ ಹೊಂದಿದೆ. ದೇಹದ ಚರ್ಮವು ಉತ್ತಮವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ಸೌಂದರ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಜೇನುತುಪ್ಪ ಪರಿಹರಿಸುತ್ತದೆ. ಬಿಸಿಲ ಝಳದಿಂದಾಗುವ ತ್ವಚೆಯ ವಿರೂಪವನ್ನು ಶಮನಗೊಳಿಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ವಿಶೇಷ ಗುಣವನ್ನು ಈ ಜೇನು ಹೊಂದಿದೆ.
ಚರ್ಮದಲ್ಲಿರುವ ಕೊಳೆಯ ಅಂಶ, ಎಣ್ಣೆಯ ಅಂಶವನ್ನು ಹೊರಹಾಕಲು ಜೇನು ತುಪ್ಪ ಸಹಕಾರಿಯಾಗಿದೆ.
ಜೇನು ತುಪ್ಪವು ಬ್ಯಾಕ್ಟಿರಿಯಾ ವಿರೋಧೀ ಗುಣ ಹೊಂದಿದೆ. ಜೇನು ಬಳಸಿ ಮುಖವನ್ನು ತೊಳೆದುಕೊಳ್ಳಿ. ನಂತರ ನೀರಿನಿಂದ ತೊಳೆಯಿರಿ. ಇದಾದ ಬಳಿಕ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಜೇನುತಪ್ಪ ಸವರಿಕೊಳ್ಳಿ. ಸುಮಾರು 20ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಹತ್ತಿ ಬಟ್ಟೆಯಿಂದ ನಿಧಾನವಾಗಿ ಮುಖ ಒರೆಸಿಕೊಳ್ಳಿ. ಈ ರೀತಿ ಹನಿ ಫೇಶಿಯಲ್ ಮಾಡಿದರೆ ಮುಖದ ಸೌಂದರ್ಯ ವೃದ್ಧಿಯಾಗಲು ಸಾಧ್ಯವಿದೆ.
ತ್ವಚೆ ಹೊಳಪಾಗಿ ಕಾಣಬೇಕೆಂದಿದ್ದರೆ ಜೇನಿನೊಂದಿಗೆ ಬಾಳೆ ಹಣ್ಣನ್ನು ಫೇಸ್ ಪ್ಯಾಕ್ ರೂಪದಲ್ಲಿ ಬಳಸಬೇಕು. ಜೇನು ಹಾಗೂ ಬಾಳೇ ಹಣ್ಣಿನ ಫೇಸ್‍ಪ್ಯಾಕ್ ಮುಖದ ಮೇಲಿರುವ ಕಲೆಗಳನ್ನು ಹೋಗಲಾಡಿಸಿ ಮುಖದ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಬಾಳೇ ಹಣ್ಣನ್ನು ಮೃದುವಾಗಿ ಪೇಸ್ಟ್ ರೀತಿಯಲ್ಲಿ ಹದ ಮಾಡಿಕೊಳ್ಳಿ. ಒಂದು ಚಮಚ ಜೇನು ಸೇರಿಸಿ ಸರಿಯಾಗಿ ಮಿಶ್ರಮಾಡಿ. ಈ ರೀತಿ ಮಾಡಿದ ಫೇಸ್ ಪ್ಯಾಕ್ ಬಳಸಿ ಮುಖ ಮತ್ತು ಕುತ್ತಿಗೆಯ ಭಾಗಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ನಂತರ ನಿಧಾನವಾಗಿ ತೊಳೆಯಿರಿ.