ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಶಕ್ತಿಮಾನ್’ 90ರ ದಶಕದಲ್ಲಿ ಜನಮೆಚ್ಚಿದ ಧಾರಾವಾಹಿ. ಚಿಕ್ಕ ಮಕ್ಕಳಿಂದಲೂ ಹಿಡಿದು ದೊಡ್ಡವರವರೆಗೆ ದೂರದರ್ಶನ ವಾಹಿನಿಯಲ್ಲಿ ಈ ಸೀರಿಯಲ್ ನೋಡುತ್ತಿದ್ದರು.
ಆ ಕಾಲದಲ್ಲಿ ಈ ಪಾತ್ರಕ್ಕೆ ಜೀವ ತುಂಬಿದವರು ನಟ ಮುಕೇಶ್ ಖನ್ನಾ.
ಇದೀಗ ಭಾರತದ ಅತ್ಯಂತ ಜನಪ್ರಿಯ ಸೂಪರ್ ಹೀರೋ ‘ಶಕ್ತಿಮಾನ್’ ಸಿನಿಮಾ ರೂಪದಲ್ಲಿ ತೆರೆಗೆ ತರಲು ತಂಡವೊಂದು ಸಜ್ಜಾಗಿದೆ. ಶಕ್ತಿಮಾನ್ ಧಾರಾವಾಹಿಗೆ ಭಾರಿ ದೊಡ್ಡ ಜನಪ್ರಿಯತೆ ಇದೆ. ಆ ಪಾತ್ರಕ್ಕೆ ಇರುವ ಗೌರವಕ್ಕೆ ಧಕ್ಕೆ ಆಗದಂತೆ ಬಾಸಿಲ್ ಜೋಸೆಫ್ ಜಾಗರೂಕತೆಯಿಂದ ಚಿತ್ರಕತೆ ಸಿದ್ಧಪಡಿಸಿರುವುದಾಗಿ ಇದಾಗಲೇ ಅನೌನ್ಸ್ ಮಾಡಿದ್ದಾರೆ.
‘ಶಕ್ತಿಮಾನ್’ ಧಾರಾವಾಹಿಯ ಮುಖ್ಯ ಅಂಶಗಳನ್ನು ಹಾಗೆಯೇ ಉಳಿಸಿಕೊಂಡೇ ‘ಶಕ್ತಿಮಾನ್’ ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಶಕ್ತಿಮಾನ್ ಆಗಿ ರಣವೀರ್ ಸಿಂಗ್ ನಟಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸೂಪರ್ ಹಿರೋ ಸಿನಿಮಾ ನಿರ್ದೇಶಿಸಿ ಅನುಭವವಿರುವ ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್. ಟೊವಿನೊ ಥಾಮಸ್ ನಟಿಸಿದ್ದ ‘ಮಿನ್ನಲ್ ಮುರಲಿ’ ಸಿನಿಮಾವನ್ನು ನಿರ್ದೇಶಿಸಿದ್ದ ಬಾಸಿಲ್ ಅವರೇ ಈಗ ‘ಶಕ್ತಿಮಾನ್’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಆದರೆ ಇದೀಗ ನಟ ರಣವೀರ್ ಸಿಂಗ್ ಅವರು ಈ ಪಾತ್ರ ಮಾಡುತ್ತಿದ್ದಾರೆ ಎಂಬ ಮಾತಿಗೆ ಮುಕೇಶ್ ಖನ್ನಾ ಕಿಡಿ ಕಾರಿದ್ದಾರೆ. ಈ ಸುದ್ದಿ ಸುಳ್ಳು ಎಂದಿರುವ ಮುಕೇಶ್ ಅವರು, ತಾವು ಶಕ್ತಿಮಾನ್ ಪಾತ್ರಕ್ಕೆ ಇವರನ್ನು ಆಯ್ಕೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಣವೀರ್ ಹೆಸರು ಹರಿದಾಡುತ್ತಿದೆ. ಈ ಸಿನಿಮಾಗೆ ರಣವೀರ್ ಸಿಂಗ್ ಸಹಿ ಮಾಡಿದ್ದಾರೆ ಎಂದು ಮಾಧ್ಯಮಗಳೂ ಹೇಳುತ್ತಿವೆ. ಆದ್ದರಿಂದ ಈಗ ಮೌನ ಮುರಿಯುವ ಸಮಯ ಬಂದಿದೆ ಎಂದಿರುವ ಮುಕೇಶ್, ರಣವೀರ್ ಸಿಂಗ್ ವಿರುದ್ಧ ಕಿಡಿ ಕಾರಿದ್ದಾರೆ.
ರಣವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಇಂಥ ಇಮೇಜ್ ಇರುವ ವ್ಯಕ್ತಿ ಶಕ್ತಿಮಾನ್ ಆಗಲಾರ ಎಂದಿದ್ದಾರೆ. ಅಷ್ಟಕ್ಕೂ ಅವರು ಈ ರೀತಿಯಾಗಿ ಹೇಳಲು ಕಾರಣವೇನೆಂದರೆ, ರಣವೀರ್ ಸಿಂಗ್ ಅವರು ಬೆತ್ತಲೆ ಫೋಟೋಶೂಟ್ ಮಾಡಿಸಿಕೊಂಡಿದ್ದರಿಂದ. ಇದು ನಮ್ಮ ಸಂಸ್ಕೃತಿಯಲ್ಲ ಎಂದಿದ್ದಾರೆ. ‘ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಅಂತಹ ದೇಶಕ್ಕೆ ಹೋಗಲಿ. ಅಲ್ಲಿ ಪ್ರತಿ ಮೂರನೇ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ನಟಿಸಬಹುದು. ಆದರೆ ಇಂಥ ವರ್ಚಸ್ಸು ಇರುವ ವ್ಯಕ್ತಿ ಶಕ್ತಿಮಾನ್ ಆಗಲು ಸಾಧ್ಯವಿಲ್ಲ. ಈ ಪಾತ್ರಕ್ಕೆ ಅದರದ್ದೇ ಆದ ಘನತೆ ಇದೆ ಎಂದಿದ್ದಾರೆ. ಶಕ್ತಿಮಾನ್ ಎಂದರೆ ಕೇವಲ ಸೂಪರ್ ಹೀರೋ ಮಾತ್ರ ಅಲ್ಲ. ಅವನು ಸೂಪರ್ ಟೀಚರ್ ಕೂಡ. ಆದ್ದರಿಂದ ಅಂಥ ಪಾತ್ರ ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು. ಇಂಥ ನಟನನ್ನು ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.