ಅಭ್ಯರ್ಥಿಯನ್ನು ನೋಡಿ ಓಟ್ ಮಾಡಿ. ಪಕ್ಷ ನೋಡಿ ಓಟು ಹಾಕಬೇಡಿ: ನಟ ಪ್ರಕಾಶ್‌ರಾಜ್

 ಹೊಸದಿಗಂತ ವರದಿ, ಮಂಗಳೂರು:

ಚುನಾವಣೆಗೆ ಒಂದು ಸಲ ಸ್ಪರ್ಧಿಸಿ ನೋಡಿ ಆಯ್ತು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ನಾನು ಜನರ ಧ್ವನಿಯಾಗಿರುತ್ತೇನೆ ಎಂದು ನಟ ಪ್ರಕಾಶ್‌ರಾಜ್ ಹೇಳಿದರು.

ಮಂಗಳೂರು ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷ ಸೇರೋದಕ್ಕೆ ನನ್ನ ಮನಸಾಕ್ಷಿ ಒಪ್ಪಿಕೊಳ್ಳಲ್ಲ. ಇಲ್ಲದಿದ್ದರೆ ಯಾವುದಾದರೂ ಪಕ್ಷ ಸೇರುವುದಕ್ಕೆ ಎಷ್ಟು ಹೊತ್ತು? ಪಕ್ಷಗಳ ಚುನಾವಣಾ ಕ್ಯಾಂಪೇನ್‌ಗೂ ಹೋಗಲ್ಲ. ಯಾವ ಪಕ್ಷವಿರಲಿ, ನಿಮ್ಮ ಅಭ್ಯರ್ಥಿಯನ್ನು ನೋಡಿ ಓಟ್ ಮಾಡಿ. ಪಕ್ಷ ನೋಡಿ ಓಟು ಹಾಕಬೇಡಿ. ಅಭ್ಯರ್ಥಿ ಕೆಲಸ ಮಾಡುತ್ತಾರಾ? ನಿಮ್ಮ ಕಷ್ಟಕ್ಕೆ ಪ್ರತಿಕ್ರಿಯಿಸುತ್ತಾರಾ? ನಿಮಗೆ ಕೈಗೆಟುಕುವಂತಿದ್ದಾರಾ? ಅವರು ಯಾವ ಪಕ್ಷದವರು ಆದರೂ ನಿಮಗೇನು? ಇಂಥ ಪ್ರಜ್ಞೆಯನ್ನು ಮತದಾರರು ಬೆಳೆಸಿಕೊಳ್ಳಬೇಕು. ಚುನಾವಣಾ ಸಮೀಕ್ಷೆಗಳೆಲ್ಲ ವ್ಯಾಪಾರ ಆಗಿದೆ. ದುಡ್ಡು ಕೊಟ್ಟು ಸಮೀಕ್ಷೆ ಮಾಡಿಸ್ತಾರೆ. ಇನ್ನು ಇದನ್ನೆಲ್ಲ ನಂಬಿ ಮೂರ್ಖರಾಗುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದರು.

ಚುನಾವಣಾ ಬಾಂಡ್ ಇಡೀ ಪ್ರಪಂಚದಲ್ಲಿ ನಡೆದಿರುವ ದೊಡ್ಡ ಹಗರಣ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಕೋಟಿಗಟ್ಟಲೆ ಹಣ ಪಕ್ಷಗಳಿಗೆ ನೀಡಿದ ಕಂಪೆನಿಗಳಿಗೆ ದೊಡ್ಡ ಮಟ್ಟದ ಕಾಂಟ್ರಾಕ್ಟ್‌ಗಳನ್ನು ನೀಡಲಾಗಿದೆ. ಇಡಿ ದಾಳಿಗೆ ಒಳಗಾದ ಅನೇಕ ಕಂಪೆನಿಗಳು ಮಾರನೇ ದಿನವೇ ಚುನಾವಣಾ ಬಾಂಡ್ ಖರೀದಿ ಮಾಡಿವೆ. ಅವರು ಕಳ್ಳರು ಎಂದು ಗೊತ್ತಿದ್ದೂ ಯಾಕೆ ಬಾಂಡ್ ತೆಗೆದುಕೊಂಡಿದ್ದೀರಿ? ಅದು ಪಾಪದ ಹಣ ಎನ್ನುವುದು ನಿಮಗೆ ಗೊತ್ತಿಲ್ವಾ? ಅಂಥವರಿಂದ ಹಣ ತೆಗೆದುಕೊಂಡ ನಿಮ್ಮ ಮೇಲೆ ಯಾಕೆ ರೈಡ್ ಮಾಡಬಾರದು ಎಂದು ಪ್ರಶ್ನಿಸಿದರು.

ಡಿಎಂಕೆ ಸೇರಿದಂತೆ ಹಲವು ಪಕ್ಷದವರು ಇಂತಹ ಕಂಪೆನಿಯವರ ಬಳಿ ಹಣ ಪಡೆದುಕೊಂಡಿದ್ದೇವೆ ಎಂದು ಬಹಿರಂಗ ಮಾಡಿದ್ದಾರೆ. ಆದರೆ ಬಿಜೆಪಿಯವರು ಯಾಕೆ ಹೇಳುತ್ತಿಲ್ಲ? ಕಂಪೆನಿಯೊಂದು ಪಕ್ಷಕ್ಕೆ 500 ಕೋಟಿ ರೂ. ಲಂಚ ಕೊಡ್ತಿದೆ ಎಂದಾದರೆ, ಅಂಥವರಿಗೆ ನೀವು ಒಂದೂವರೆ ಸಾವಿರ ಕೋಟಿ ರು., 2 ಸಾವಿರ ಕೋಟಿ ರೂ.ಗಳ ಗುತ್ತಿಗೆ ಕೊಡ್ತೀರಿ ಅಂದರೆ ಆ ಗುತ್ತಿಗೆ ಹಣ ನಮ್ಮ ಜನರ ದುಡ್ಡು ಅಲ್ವಾ? ಈ ದುಡ್ಡಲ್ಲೇ ನೀವು ಎಂಎಲ್‌ಎ, ಎಂಪಿಗಳ ಖರೀದಿ ಮಾಡ್ತಿದ್ದೀರಾ? ಮನ್ ಕಿ ಬಾತ್‌ನಲ್ಲಿ ನರೇಂದ್ರ ಮೋದಿ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಕಾಶ್ ರೈ ಪ್ರಶ್ನಿಸಿದರು.

ಈಗ ‘ಮೋದಿ ಪರಿವಾರ್’ ಅಂತಾರೆ. ಅವರ ಪರಿವಾರ ಯಾವುದು ಎನ್ನುವುದು ಈಗ ಗೊತ್ತಾಗಿದೆ. ಲಾಟರಿ ಮಾಡುವ ಕಂಪೆನಿ ಇವರ ಪರಿವಾರ, ಫಾರ್ಮಾ ಕಂಪೆನಿ, ಅದಾನಿ ಪರಿವಾರ, ರೇಪ್ ಮಾಡಿದ ಬ್ರಿಜ್ ಭೂಷಣ್ ಅವರದ್ದೇ ಪರಿವಾರ. ಈಗ ಚುನಾವಣಾ ಬಾಂಡ್ ಹೊರಬಂದ ಮೇಲೆ ಬಿಜೆಪಿ ದೇಶದ ಎದುರು ಬೆತ್ತಲಾಗಿದೆ ಎಂದು ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!