Tuesday, March 28, 2023

Latest Posts

ಎಐಎಡಿಎಂಕೆಯ ಏಕೈಕ ನಾಯಕನಾಗಿ ಇಪಿಎಸ್‌ಗೆ ಅವಕಾಶ: ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರನ್ನು ಎಐಎಡಿಎಂಕೆ ಪಕ್ಷದ ಏಕೈಕ ನಾಯಕರನ್ನಾಗಿ ಮರುಸ್ಥಾಪಿಸಿದ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಇಪಿಎಸ್ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವಂತೆ ತೀರ್ಪು ನೀಡಿದ್ದು, ಈ ತೀರ್ಪು ಓ ಪನ್ನೀರಸೆಲ್ವಂ ಅವರಿಗೆ ಹಿನ್ನಡೆಯನ್ನುಂಟು ಮಾಡಿದೆ. ಪನ್ನೀರಸೆಲ್ವಂ ಪರ ವಕೀಲರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನೇತೃತ್ವದ ಪೀಠ ಈ ತೀರ್ಪು ಪ್ರಕಟಿಸಿದೆ.

ಎಐಎಡಿಎಂಕೆ ನಾಯಕತ್ವದ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಓ ಪನ್ನೀರಸೆಲ್ವಂ (ಒಪಿಎಸ್) ಮತ್ತು ಇಪಿಎಸ್ ನಡುವಿನ ಜಗಳಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಜನವರಿ 11 ರಂದು, ತೀರ್ಪನ್ನು ಸುಪ್ರೀಂ ಕೋರ್ಟ್ ಪೀಠವು ಕಾಯ್ದಿರಿಸಿತ್ತು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಇಪಿಎಸ್ ಅವರನ್ನು ಪಕ್ಷದ ಏಕೈಕ ನಾಯಕನನ್ನಾಗಿ ಮರುಸ್ಥಾಪಿಸಿದ ಮದ್ರಾಸ್ ಹೈಕೋರ್ಟ್ ನಿರ್ಧಾರದ ವಿರುದ್ಧ ಒಪಿಎಸ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು

ಮಾಜಿ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪ್ರಧಾನ ಕಾರ್ಯದರ್ಶಿ ಜಯಲಲಿತಾ  ನಿಧನರಾದಾಗಿನಿಂದ, ಪಕ್ಷವು ಒಪಿಎಸ್ ಮತ್ತು ಇಪಿಎಸ್ ಬಣಗಳಾಗಿ ಕಚ್ಚಾಡುತ್ತಿವೆ. ಆದರೆ, ಕಳೆದ ವರ್ಷ ಜುಲೈನಲ್ಲಿ ನಡೆದ ನಿಯಮಿತ ಕೌನ್ಸಿಲ್ ಸಭೆಯಲ್ಲಿ ಬಹು ನಾಯಕತ್ವವನ್ನು ಪರಿಷತ್ತು ರದ್ದುಗೊಳಿಸಿತು. ಅದೇ ಕೌನ್ಸಿಲ್‌ನಲ್ಲಿ ಸದಸ್ಯರು ಎಐಎಡಿಎಂಕೆಯ ಹಂಗಾಮಿ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಿದರು. ಈ ಪರಿಷತ್ತಿನಲ್ಲಿ ಕೈಗೊಂಡ ನಿರ್ಣಯಗಳ ವಿರುದ್ಧ ಪನ್ನೀರು ಸೆಲ್ವಂ ಅವರು ಹೈಕೋರ್ಟ್‌ನಲ್ಲಿ ತೀರ್ಪನ್ನು ಪ್ರಶ್ನಿಸಿದರು. ಆದರೆ, ಪನ್ನೀರಸೆಲ್ವಂ ಅವರಿಗೆ ಹೈಕೋರ್ಟ್‌ನಲ್ಲೂ ಹಿನ್ನಡೆಯಾದ ಕಾರಣ ಸುಪ್ರೀಂ ಮೊರೆ ಹೋದರು.

ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪನ್ನೀರು ಸೆಲ್ವಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹಲವು ವಾದ-ವಿವಾದಗಳ ಬಳಿಕ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಮದ್ರಾಸ್ ಹೈಕೋರ್ಟ್ ತೀರ್ಪನ್ನು ಬೆಂಬಲಿಸುವ ತೀರ್ಪು ಪ್ರಕಟಿಸಿದ ನಂತರ ಪನ್ನೀರಸೆಲ್ವಂ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಜಯಲಲಿತಾ ಅವರ ಉತ್ತರಾಧಿಕಾರಿ ಪಳನಿ ಸ್ವಾಮಿ ಎಂದು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!