ತಮಿಳುನಾಡಿನ ವನ್ನಿಯಾರ್‌ ಸಮುದಾಯದ ಮೀಸಲಾತಿ ರದ್ದುಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮಿಳುನಾಡಿನ ವನ್ನಿಯಾರ್‌ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನೀಡಲಾಗಿದ್ದ ಶೇ. 10.5 ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ವನ್ನಿಯಾರ್ ಮೀಸಲಾತಿ ಅಸಂವಿಧಾನಿಕ ಎಂದು ನ್ಯಾಯಾಲಯ ಪ್ರಕಟಿಸಿದೆ.
ಗುರುವಾರ ಪ್ರಕರಣದ ಕುರಿತು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಬಿ.ಆರ್.ಗವಾಯಿ ಅವರನ್ನೊಳಗೊಂಡ ಪೀಠವು, ವನ್ನಿಯಾರ್‌ ಗಳನ್ನು ವನ್ನಿಯಾಕುಲ ಕ್ಷತ್ರೀಯರೆಂದು ಒಂದೇ ಗುಂಪಿನಡಿ ಪರಿಗಣಿಸಲು ಯಾವುದೇ ದೃಢವಾದ ಆಧಾರಗಳಿಲ್ಲ.
ಆದ್ದರಿಂದ ವನ್ನಿಯಾರ್‌ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದು ಸಂವಿಧಾನದ 14, 15 ಮತ್ತು 16 ನೇ ವಿಧಿಗಳ ಉಲ್ಲಂಘನೆಯಾಗಿದೆ. ಹೀಗಾಗಿ ನಾವು ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುತ್ತೇವೆ ಎಂದು ಪೀಠ ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಆಗಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ಮಂಡಿಸಿದ್ದ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಅಂಗೀಕರಿಸಿತ್ತು. ಇದರಲ್ಲಿ ವನ್ನಿಯಾರ್ ಸಮುದಾಯಕ್ಕೆ ಶೇ.10.5ರಷ್ಟು ಒಳ ಮೀಸಲಾತಿ ಕಲ್ಪಿಸಲಾಗಿತ್ತು. ಆ ಬಳಿಕ ಜುಲೈ 2021 ರಲ್ಲಿ ಸರ್ಕಾರವು ಕಾಯ್ದೆಯ ಅದರ ಅನುಷ್ಠಾನಕ್ಕೆ ಆದೇಶವನ್ನು ಹೊರಡಿಸಿತು. ರಾಜ್ಯ ಸರ್ಕಾರವು ಎಂಬಿಸಿಗಳು ಮತ್ತು ಅಧಿಸೂಚಿತ ಸಮುದಾಯಗಳಿಗೆ ಒಟ್ಟು ಶೇಕಡಾ 20 ರ ಮೀಸಲಾತಿಯನ್ನು ನೀಡಿ ಮೂರು ವಿಭಿನ್ನ ವರ್ಗಗಳಾಗಿ ವಿಂಗಡಿಸಿದೆ. ಇದರ ಅಡಿಯಲ್ಲಿ ವನ್ನಿಯಾರ್ ಗಳನ್ನು ಒಂದೇ ಗುಂಪಾಗಿ ಪರಿಗಣಿಸಿ ಶೇಕಡಾ 10 ಕ್ಕಿಂತ ಹೆಚ್ಚು ಉಪಕೋಟಾವನ್ನು ನಿಗದಿಪಡಿಸಲಾಯಿತು. ಹಿಂದೆ ವನ್ನಿಯಾರನ್ನ ವನ್ನಿಯಾಕುಲ ಕ್ಷತ್ರಿಯರೆಂದು ಕರೆಯಲಾಗುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here