ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ದೇಗುಲದಲ್ಲಿ ಬಳಸಿದ ತುಪ್ಪದಲ್ಲಿ ನಡೆದಿದ್ದ ಭಾರಿ ಅವ್ಯವಹಾರ ಪ್ರಕರಣ ಬಯಲಾದ ಬೆನ್ನಲ್ಲೇ ಇದೀಗ ಹಿಂದುಗಳ ಮತ್ತೊಂದು ಪವಿತ್ರ ಕ್ಷೇತ್ರ ಶಬರಿಮಲೆ ತುಪ್ಪದಲ್ಲೂ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಹೇಳಲಾಗಿದೆ.
ಈ ಹಿಂದೆ ಸನ್ನಿಧಾನದ ಚಿನ್ನದ ಕಳ್ಳತನ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶಬರಿಮಲೆಯಲ್ಲಿ ಇದೀಗ ಮತ್ತೊಂದು ಹಗರಣ ಭಾರಿ ಸದ್ದು ಮಾಡುತ್ತಿದೆ. ಈ ಬಾರಿ ಅಯ್ಯಪ್ಪ ಭಕ್ತರಿಗೆ ನೀಡುವ ತುಪ್ಪದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಂಬಂಧ ಕೇರಳ ಹೈಕೋರ್ಟ್ ಕೂಡ ವಿಜಿಲೆನ್ಸ್ ತನಿಖೆಗೆ ಆದೇಶಿಸಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ.
ಶಬರಿಮಲೆ ಸನ್ನಿಧಾನದಲ್ಲಿ ‘ಆದಿಯ ಶಿಷ್ಟಂ ತುಪ್ಪ’ (ತುಪ್ಪದ ಅಭಿಷೇಕದ ನಂತರ ಉಳಿದ ತುಪ್ಪ) ಮಾರಾಟದಿಂದ ಬಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ವಿಜಿಲೆನ್ಸ್ ತನಿಖೆಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಪವಿತ್ರ ತುಪ್ಪ ಮಾರಾಟದಿಂದ ಬಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ವಿವರವಾದ ವಿಜಿಲೆನ್ಸ್ ತನಿಖೆ ಕೋರಿ ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ ವರದಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ವಿ ರಾಜ ವಿಜಯರಾಘವನ್ ಮತ್ತು ಕೆ ವಿ ಜಯಕುಮಾರ್ ಅವರ ಪೀಠವು ಈ ಆದೇಶವನ್ನು ನೀಡಿದೆ.
2ನೇ, 3ನೇ ಮತ್ತು 5ನೇ ಹಂತಗಳಲ್ಲಿ ಕೆಲಸ ಮಾಡಿದ್ದಾರೆಂದು ಹೇಳಲಾದ ಸುನೀಲ್ ಕುಮಾರ್ ಪೊಟ್ಟಿ ವಿರುದ್ಧವೂ ಗಂಭೀರ ಆರೋಪಗಳಿವೆ ಎಂದು ನ್ಯಾಯಾಲಯ ಹೇಳಿದೆ.


