ಹೊಸ ದಿಗಂತ ವರದಿ, ಮಡಿಕೇರಿ:
ಮನೆ-ಮನೆಗೆ ತೆರಳಿ ಚಿನ್ನಾಭರಣಗಳನ್ನು ಪಾಲಿಶ್ ಮಾಡುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ರಾಜಕುಮಾರ (29), ಪ್ರವೀಣ್ ಕುಮಾರ್ (32) ಹಾಗೂ ಲಲನ್ ಕುಮಾರ್ (26) ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 15 ಗ್ರಾಂ ಚಿನ್ನ ಹಾಗೂ ಪಾಲಿಶ್ ಮಾಡಲು ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಚಿನ್ನಾಭರಣಗಳನ್ನು ಪಾಲಿಶ್ ಮಾಡುವ ನೆಪದಲ್ಲಿ ಆಭರಣಗಳನ್ನು ಪಡೆದು ಪಾಲಿಶ್ ಸಾಮಾಗ್ರಿ ಹಾಗೂ ಆ್ಯಸಿಡ್ ಬಳಸಿ ಸಲ್ಪ ಮಟ್ಟಿನ ಚಿನ್ನವನ್ನು ಕರಗಿಸಿ ಮೋಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು.
ಈ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರ ಸಂಬಂಧ ಕುಶಾಲನಗರ ವೃತ್ತದ ಇನ್ಸ್ಪೆಕ್ಟರ್ ಮಹೇಶ್ ಬಿ.ಜಿ, ಸಬ್ ಇನ್ಸ್ಪೆಕ್ಟರ್ ಪುನೀತ್ ಡಿ.ಎಸ್, ಕುಶಾಲನಗರ ಗ್ರಾಮಾಂತರ ಪಿಎಸ್ಐ ದಿನೇಶ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಅದರಂತೆ ಫೆ.25ರಂದು ಹೆಬ್ಬಾಲೆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದ ಮೂವರು ಆರೋಪಿಗಳನ್ನು ತನಿಖಾ ತಂಡ ಪತ್ತೆಹಚ್ಚಿ ಬಂಧಿಸಿದೆ.
ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು, ಮನೆ-ಮನೆಗೆ ಆಗಮಿಸಿ ಚಿನ್ನಾಭರಣಗಳನ್ನು ಪಾಲಿಶ್
ಮಾಡುವುದಾಗಿ ಬರುವ ವ್ಯಕ್ತಿಗಳನ್ನು ನಂಬದೇ ಪಾಲಿಶ್ ಹಾಗೂ ಇತರೆ ಕಾರ್ಯಗಳಿಗೆ ಸ್ಥಳೀಯ ಅಧಿಕೃತ ಜ್ಯುವೆಲರಿ ಅಂಗಡಿಗಳಲ್ಲಿ ಮಾಡಿಸುವಂತೆ ಕೋರಿದ್ದಾರೆ.ಅಲ್ಲದೆ ಚಿನ್ನಾಭರಣಗಳನ್ನು ಪಡೆದು ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕರಗಿಸಿ ವಂಚಿಸುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆಯೂ ಅವರು ಮನವಿ ಮಾಡಿದ್ದಾರೆ.