ಹೊಸ ದಿಗಂತ ವರದಿ, ಶಿರಸಿ:
ಬನವಾಸಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮ( ಪಿಲಿಗ್ರಿಂ ಟೂರಿಸಂ) ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ನಡೆಯುತ್ತಿರುವ ಕದಂಬೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಆದಿಕವಿ ಪಂಪ ಬನವಾಸಿಯನ್ನು ಸುಭೀಕ್ಷೆಯ ನಾಡು ಎಂದು ವರ್ಣಿಸಿದ್ದಾನೆ. ಪಂಪ ವರ್ಣಿಸಿದಂತೆ ಬನವಾಸಿ ಅಭಿವೃದ್ಧಿ ಪಡಿಸಲು ಸರ್ಕಾರ ಬದ್ದವಾಗಿದೆ. ಅಂದಿನ ಗತವೈಭವ ಮರಳಿ ಸಾರುವಂತಾಗಲಿ ಎಂದರು.
ಬನವಾಸಿಯ ನಾಡಿನಲ್ಲಿ ಸಾಹಿತ್ಯ ರಚನೆ ಮಾಡಿ ಕನ್ನಡ ನಾಡಿಗೆ ಮುನ್ನಡಿ ಬರೆದವರು ಪಂಪ ಮಹಾಕವಿಗಳು.
ಕಲೆಗೆ ಶಿಲ್ಪಕಲೆಗೆ ಅಂದಿನ ಕಾಲದಲ್ಲಿ ಬಹಳಷ್ಟು ಮಹತ್ವವಿತ್ತು. ಅದನ್ನು ಮತ್ತೇ ಅಭಿವೃದ್ಧಿ ಪಡಿಸಲಾಗುವುದು.
ಫಲವತ್ತಾದ ಭೂಮಿಯನ್ನು ಹೊಂದಿದ ಊರು ಬನವಾಸಿ. ಈ ಭಾಗದಲ್ಲಿ ಕೆರೆಗಳಿಗೆ ನೀರು ಕೊರತೆಯಾಗುತ್ತದೆ ಎಂದು ೬೨ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯನ್ನು ಶಿವರಾಮ ಹೆಬ್ಬಾರ ತಂದಿದ್ದಾರೆ. ಶಿವರಾಮ ಹೆಬ್ಬಾರ ಅವರಿಗೆ ಜನರು ನೀಡಿದ ಭಗೀರಥ ಎಂಬ ಬಿರುದು ಸಾರ್ಥಕವಾಗಿದೆ.
ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸ ಈ ಭಾಗದಲ್ಲಿ ಶಿವರಾಮ ಹೆಬ್ಬಾರವರು ಮಾಡಿದ್ದಾರೆ.
ಈ ವರ್ಷ ಬಜಟ್ ನಲ್ಲಿ ನಮ್ಮನ್ನು ಆಳಿದ ರಾಜಮನೆತನಗಳ ಗತವೈಭವ ವನ್ನು ಮರುಕಳಿಸಲು ವಿಶೇಷ ಅನುದಾನ ನೀಡಿದ್ದೇವೆ.
ಪಂಪನ ಹುಟ್ಟೂರು ಅಣ್ಣಿಗೇರಿಯ ಅಭಿವೃದ್ಧಿಗೆ ಗಮನ ಹರಿಸಿದ್ದೇವೆ.
ಪಂಪನ ಕನಸಿನ ಬನವಾಸಿಯ ಅಭಿವೃದ್ಧಿ ಯನ್ನು ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬನವಾಸಿಯನ್ನು ಮಾದರಿ
ಪ್ರವಾಸಿ ತಾಣವನ್ನಾಗಿ ಮಾಡುತ್ತೇವೆ. ಪ್ರವಾಸೋದ್ಯಮ ಸೇರಿ ಹಲವು ರೀತಿಯಲ್ಲಿ ಬನವಾಸಿ ಅಭಿವೃದ್ಧಿ ಮಾಡಿ ಬನವಾಸಿಗೆ ಮೆರಗು ತರುವ ಕೆಲಸ ಸರ್ಕಾರ ಮಾಡುತ್ತದೆ.ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದಿತ್ತಿರುವ ನಾಡು ಕನ್ನಡ ನಾಡಾಗಿದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರುಗಳಾದ ಗೋವಿಂದ ಕಾರಜೋಳ, ಶಿವರಾಮ ಹೆಬ್ಬಾರ್ , ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ವಿ.ಪ ಸದಸ್ಯ ಶಾಂತಾರಾಮ ಸಿದ್ದಿ, ಪ್ರಮುಖ ಪ್ರಮೋದ ಹೆಗಡೆ, ಗೋವಿಂದ ನಾಯ್ಕ ಮತ್ತಿತರರು ಇದ್ದರು.