STORY | ಅಪ್ಪನ ಕಾರ್ ಮೇಲೆ ಗೀಚಿ ಕೆನ್ನೆ ಮೇಲೆ ಏಟು ತಿಂದ್ಲು ಪುಟಾಣಿ!

ಮೇಘನಾ ಶೆಟ್ಟಿ ಶಿವಮೊಗ್ಗ

ಅಪ್ಪನಿಗೆ ಸಿಕ್ಕಾಪಟ್ಟೆ ಕಾರ್ ಕ್ರೇಜ್ ಇತ್ತು. ಆದ್ರೆ ಅಂದ್ಕೊಂಡಿದ್ದೆಲ್ಲಾ ಕೊಳ್ಳೋ ಅಷ್ಟು ದುಡ್ಡಿರ‍್ಲಿಲ್ಲ. ಅವ್ರಿವ್ರ ಕಾರ್ ಓಡ್ಸಿ ಖುಷಿ ಪಡ್ತಿದ್ದ. ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ಅಪ್ಪ ಅಂತೂ ಡೌನ್ ಪೇಮೆಂಟ್ ಹೊಂದಿಸಿದ.

ಹೆಂಡತಿ ಮಗಳ ಜೊತೆ ಹೋಗಿ ನೀಲಿ ಬಣ್ಣದ ಕಾರ್ ಒಂದನ್ನು ಸೆಲೆಕ್ಟ್ ಮಾಡಿ ಬಂದ್ರು. ಲೋನ್ ಕೂಡ ಅಪ್ರೂವ್ ಆಯ್ತು. ಈ ಕಾರ್ ಋಣ ತೀರ್ಸೋಕೆ ಅಪ್ಪ ಎಂಟು ವರ್ಷ ದುಡೀಬೇಕಿತ್ತು.

ಹೀಗೆ ದಿನ ಕಳೆದಿತ್ತು. ಅಪ್ಪ ಸ್ವಂತ ಮಗಳನ್ನು ನೋಡ್ಕೊಳೋ ಹಾಗೇ ಕಾರ್‌ನ್ನು ನೋಡ್ಕೋತಿದ್ದ. ವಾರಕ್ಕೆ ಎರಡು ದಿನ ಆದ್ರೂ ಕಾರ್‌ನ್ನು ತಿಕ್ಕಿ ತಿಕ್ಕಿ ತೊಳೀತಿದ್ದ. ವರ್ಷಗಳೇ ಕಳೆದ್ರು ಈಗ ನೆನ್ನೆ ಶೋರೂಮ್ ಇಂದ ತಂದ ಕಾರ್ ಥರ ಇತ್ತು.

ಮಗಳಿಗೆ ಈಗಿನ್ನೂ ಐದು ವರ್ಷ. ಮಗಳ ಕಾಲ್ಗುಣ, ಅಪ್ಪನಿಗೆ ಪ್ರಮೋಷನ್ ಸಿಗ್ತು. ಸಂಬಳ ಹೆಚ್ಚಾಯ್ತು. ನೈಟ್ ಶಿಫ್ಟ್ ಬಂದಾಯ್ತು. ಆದರೂ ಬ್ಯುಸಿಯಾಗಿದ್ದ ಅಪ್ಪ ವೀಕೆಂಡ್‌ನಲ್ಲಿ ಮಾತ್ರ ಮಗಳಿಗೆ ಸಮಯ ಕೊಡ್ತಿದ್ದ.

ಒಂದಿನ ಮಾಮೂಲಿಯಂತೆ ಕಾರ್ ವಾಶ್ ಮಾಡೋಕೆ ಅಪ್ಪ ಬಂದಿದ್ದ. ಅಮ್ಮ ಹೂವು ಕೀಳ್ತಾ ಇದ್ಲು. ಮಗಳ ಗೆಜ್ಜೆ ಸೌಂಡ್ ಅಲ್ಲೇ ಎಲ್ಲೋ ಕೇಳ್ತಾ ಇತ್ತು. ಮಗಳು ಕಾರ್‌ನ ಆಚೆ ಬದಿಯಿಂದ ಬಂದು ಅಪ್ಪಾ ಅಂತ ಚೂಪಾದ ಕಲ್ಲನ್ನು ತೋರ್ಸಿದ್ಲು. ಅಪ್ಪ ಪೆದ್ದ ಅಲ್ಲ, ಕಾರ್ ಮೇಲೆ ಏನೋ ಗೀಚಿದಾಳೆ ಅಂತ ಗೊತ್ತಾಯ್ತು. ಯೋಚ್ನೆ ಮಾಡದೆ ಆಕೆ ಕೆನ್ನೆಗೆ ಬಾರಿಸಿ ಒಳಗ್ ಹೋಗು ಅಂತ ಕೂಗ್ದ.

ಅಪ್ಪನ ಈ ಉಗ್ರರೂಪ ನೋಡಿದ್ದು ಇದೇ ಮೊದಲು, ಭೂಮಿಯೇ ಬಿರಿದಷ್ಟು ಜೋರಾಗಿ ಮಗಳು ಅಳ್ತಿದ್ಲು. ಕಂದನ ಕಣ್ಣೀರಿಗಿಂತ ಕಾರ್ ಹಾಳಾಗಿದ್ದು ಅಪ್ಪನಿಗೆ ಚಿಂತೆ ಇತ್ತು. ಅಮ್ಮ ತಕ್ಷಣ ಬಂದು ಗಂಡನಿಗೊಂದು ಕೆಟ್ಟ ಲುಕ್ ಕೊಟ್ಟು ಮಗಳನ್ನು ಕರೆದುಕೊಂಡು ಒಳಗೆ ಹೋದ್ಲು.

ಎಷ್ಟ್ ಡ್ಯಾಮೇಜ್ ಮಾಡಿದಾಳೆ ನೋಡಣ ಅಂತ ಕಾರ್‌ನ ಇನ್ನೊಂದು ಬದಿಗೆ ಅಪ್ಪ ಬಂದ, ಅಪ್ಪನಿಗೆ ಸರ್ಪೈಸ್ ಮಾಡೋಕೆ ಮಗಳು I LOVE YOU DADDY ಅಂತ ಬರೆದಿದ್ಲು!

ಅಪ್ಪನಿಗೆ ಹೊಟ್ಟೆ ಉರ್ದಿರ್ಬೋದು, ಜೀವ ಇಲ್ಲದಿರೋ ವಸ್ತುಗೋಸ್ಕರ ಮಗಳ ಮೇಲೆ ಕೈ ಮಾಡಿದೆ ಅಂತ ಕಣ್ಣೀರಿಟ್ಟಿರಬಹುದು. ನಮಗೆ ಗೊತ್ತಿಲ್ಲ ಮುಂದೇನಾಯ್ತು ಅಂತ.
ಆದರೆ ಯಾಕಿಷ್ಟು ಕೋಪ? ಈಗಿನ ಜಗತ್ತಿನಲ್ಲಿ ಬೆಳೆದು ಬಲಿತ ಎಷ್ಟೋ ದೊಡ್ಡವರೇ ನಾನ್‌ಸೆನ್ಸ್ ರೀತಿ ನಡೆದುಕೊಳ್ಳುವಾಗ ಗೊತ್ತಿಲ್ಲದೆ ಮಗಳು ಮಾಡಿದ್ದು ತಪ್ಪಾ? ಮಕ್ಕಳು ಗೋಡೆ ಮೇಲೆ ಗೀಚ್ತಾರೆ ಅಂತ ಬಣ್ಣದ ಪೆನ್ಸಿಲ್ ಕಿತ್ಕೊಂಡು ಕ್ರಿಯೇಟಿವಿಟಿ ಕೊಲ್ತೀರಿ. ಬಾಡಿಗೆ ಮನೆಯಾಗ್ಲಿ ಸ್ವಂತ ಮನೆಯಾಗ್ಲಿ. ಪೇಂಟ್ ಮಾಡಿಸ್ಬೋದಲ್ವಾ? ಅಥವಾ ಹಾಗೇ ಇರಲಿ ಬಿಡಿ. ಮಕ್ಕಳು ಗೀಚಿದ್ದೂ ಚಿತ್ರ, ಅದು ನೆನಪು, ಸರಿಯಾಗಿ ನೋಡಿದ್ರೆ ಸುಂದರವಾಗಿಯೇ ಇದೆ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!