ಕಡಲ ಕೊರೆತದಿಂದ ಕರಾವಳಿಗೆ ಕಾದಿದೆ ಕಂಟಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಲ್ಲಿ: ಭಾರತದ ಕರಾವಳಿಯ ಆಯ್ದ ಸ್ಥಳಗಳಲ್ಲಿ ಭೂ ವಿಜ್ಞಾನ ಸಚಿವಾಲಯದಡಿಯ ‘ನ್ಯಾಷನಲ್ ಸೆಂಟರ್ ಫಾರ್ ಕೋಸ್ಟಲ್ ರಿಸರ್ಚ್’ (ಎನ್‌ಸಿಸಿಆರ್) ಸಂಸ್ಥೆಯು ಕಡಲ ಕೊರೆತದಿಂದಾಗಿ ಉಂಟಾಗಿರುವ ಅಪಾಯ ಸಾಧ್ಯತೆ ಅಧ್ಯಯನಗಳನ್ನು ಕೈಗೊಂಡಿದೆ. ತೀವ್ರ ಮಳೆ ಮತ್ತು ಅದರಿಂದ ಉಂಟಾದ ಪ್ರವಾಹವು ಮೀನುಗಾರರು ಸೇರಿದಂತೆ ಕರಾವಳಿ ಸಮುದಾಯಗಳಿಗೆ ಅಪಾಯ ತಂದೊಡ್ಡಿದೆ ಎಂದು ಅದು ತಿಳಿಸಿದೆ.

ಭೂ ವಿಜ್ಞಾನ ಸಚಿವಾಲಯದ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಐ-ಫ್ಲೋಸ್ ಅಭಿವೃದ್ಧಿ:
ಭಾರಿ ಮಳೆಯ ಸಂದರ್ಭದಲ್ಲಿ ಪ್ರವಾಹದ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂಲಕ ಸರಕಾರಗಳಿಗೆ ಮಾಹಿತಿಯನ್ನು ನೀಡಲು ಮತ್ತು ಆ ಮೂಲಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಎರಡು ಕರಾವಳಿ ನಗರಗಳಾದ ಚೆನ್ನೈ ಮತ್ತು ಮುಂಬೈಗೆ ‘ಸಮಗ್ರ ಪ್ರವಾಹ ಎಚ್ಚರಿಕೆ ವ್ಯವಸ್ಥೆ’ಯನ್ನು (ಐ-ಫ್ಲೋಸ್) ಅಭಿವೃದ್ಧಿಪಡಿಸಲಾಗಿದೆ.

ತೂಂಡಿಲ್ ಮೊಬೈಲ್ ಆ್ಯಪ್:
ಅಪಾಯಗಳ ಸಂದರ್ಭದಲ್ಲಿ ಕರಾವಳಿ ಮೀನುಗಾರರಿಗೆ ಮಾಹಿತಿಯನ್ನು ಪ್ರಸಾರ ಮಾಡಲು ತಮಿಳುನಾಡು ಸರಕಾರದ ಮೀನುಗಾರಿಕೆ ಇಲಾಖೆಯೊಂದಿಗೆ ‘ತೂಂಡಿಲ್’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಎನ್‌ಸಿಸಿಆರ್ ಅಭಿವೃದ್ಧಿಪಡಿಸಿದೆ. ಇದಲ್ಲದೆ, ಕರಾವಳಿಯನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲ ಕರಾವಳಿ ರಾಜ್ಯಗಳಿಗೆ ಸಮುದ್ರ ಕೊರೆತದಿಂದಾಗಿ ಕರಾವಳಿಗೆ ಉಂಟಾಗಿರುವ ಅಪಾಯದ ಬಗ್ಗೆ ಎನ್‌ಸಿಸಿಆರ್‌ನಿಂದ ಮಾಹಿತಿ ಒದಗಿಸಲಾಗಿದೆ.

ಭೂ ವಿಜ್ಞಾನ ಸಚಿವಾಲಯವು (ಎಂಒಇಎಸ್) ತಮಿಳುನಾಡಿನ ಪುದುಚೇರಿ ಮತ್ತು ಕಡಲೂರು ಪೆರಿಯಾಕುಪ್ಪಂ ಗ್ರಾಮದಲ್ಲಿ ಕಡಲಕೊರೆತ ತಗ್ಗಿಸುವ ಕ್ರಮಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಪ್ರವಾಹ ಎಚ್ಚರಿಕೆ ವ್ಯವಸ್ಥೆ ಮತ್ತು ಮೀನುಗಾರಿಕೆ ಸಮುದಾಯಕ್ಕಾಗಿ ಆಂಡ್ರಾಯ್ಡ್ ಆಧಾರಿತ ಆ್ಯಪ್‌ನಂತಹ ಸಾಧನಗಳ ಅಭಿವೃದ್ಧಿಯ ಸಮಯದಲ್ಲಿ ಕರಾವಳಿ ಪ್ರದೇಶದ ಮೀನುಗಾರರು ಮತ್ತು ಸ್ಥಳೀಯ ಆಡಳಿತ/ಸರಕಾರಿ ಸಂಸ್ಥೆಗಳನ್ನು ಸಮಾಲೋಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!