July 5, 2026
Sunday, July 5, 2026
spot_img

ಖಮೇನಿ ಅಂತ್ಯಕ್ರಿಯೆಗೆ ಹರಿದುಬಂದ ಜನಸಾಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಲಕ್ಷಾಂತರ ಜನರನ್ನು ನೋಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆಕ್ಸಿಯಾಸ್ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ಜನಾಂಗವು ಖಮೇನಿಯನ್ನು ದ್ವೇಷಿಸುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅಲ್ಲಿನ ಪರಿಸ್ಥಿತಿ ತದ್ವಿರುದ್ಧವಾಗಿದೆ” ಎಂದು ಆಶ್ಚರ್ಯಪಟ್ಟಿದ್ದಾರೆ.

ಟೆಹ್ರಾನ್‌ನಲ್ಲಿ ಮೊಳಗಿದ ‘ಸೇಡು’ ಘೋಷಣೆ

ಇಸ್ರೇಲಿ ದಾಳಿಗೆ ಬಲಿಯಾಗಿದ್ದ 86 ವರ್ಷದ ಖಮೇನಿ ಅವರ ಅಂತಿಮ ವಿಧಿವಿಧಾನಗಳು ಶನಿವಾರ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಆರಂಭಗೊಂಡಿವೆ. ಶೋಕತಪ್ತ ಸಾರ್ವಜನಿಕರು ಖಮೇನಿ ಅವರ ಬ್ಯಾನರ್ ಹಿಡಿದು, “ನಮ್ಮ ಮಾತು ಒಂದೇ ಸೇಡು ಸೇಡು” ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಶಿಯಾ ಸಂಪ್ರದಾಯದಂತೆ ಎದೆಗೆ ಬಡಿದುಕೊಳ್ಳುತ್ತಾ ದುಃಖಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಆರು ದಿನಗಳ ಸುದೀರ್ಘ ಅಂತಿಮ ಯಾತ್ರೆ

ಯುದ್ಧದ ತೀವ್ರತೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ಈ ಅಂತ್ಯಕ್ರಿಯೆಯು ಪ್ರಸ್ತುತ ಆರಂಭವಾಗಿದ್ದು, ಮೂರು ದಿನಗಳ ಕಾಲ ಟೆಹ್ರಾನ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಜುಲೈ 7 ರಂದು ಪವಿತ್ರ ನಗರ ಕೋಮ್ ಹಾಗೂ ಬುಧವಾರ ಇರಾಕ್‌ನಲ್ಲಿ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ಗುರುವಾರ, ಅವರ ಹುಟ್ಟೂರಾದ ಮಶಾದ್‌ನಲ್ಲಿ ಮಗಳು ಹಾಗೂ ಮೊಮ್ಮಗಳ ಸಮಾಧಿಯ ಪಕ್ಕದಲ್ಲೇ ಇವರನ್ನು ಹೂಳಲಾಗುತ್ತದೆ.

ಹೊಸ ನಾಯಕ ಮೊಜ್ತಬಾ ಗೈರು

ಭದ್ರತಾ ಕಾರಣಗಳು ಹಾಗೂ ಇಸ್ರೇಲ್‌ನ ನಿರಂತರ ಕಣ್ಗಾವಲಿನಿಂದಾಗಿ, ಇರಾನ್‌ನ ನೂತನ ಸರ್ವೋಚ್ಚ ನಾಯಕ ಹಾಗೂ ಖಮೇನಿ ಅವರ ಪುತ್ರರಾದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇರಾನ್ ಪ್ರಸ್ತುತ ಹಾರ್ಮುಜ್ ಜಲಸಂಧಿಯ ಹಿಡಿತ ಬಳಸಿಕೊಂಡು ಅಮೆರಿಕದೊಂದಿಗೆ ಮಾತುಕತೆಗೆ ಯತ್ನಿಸುತ್ತಿದ್ದರೂ, ಇಸ್ರೇಲ್‌ನ ಮರುದಾಳಿಯ ಭೀತಿಯೂ ಇರಾನ್ ಅನ್ನು ಕಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !