ಹುಡುಕಾಟದ ನೆಪದಲ್ಲಿ ಮನೆಗೆ ನುಗ್ಗಿದವರು ಯಾರು?

ಹೊಸದಿಗಂತ ಆನ್ ಲೈನ್ ಡೆಸ್ಕ್

ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಿ ಸುಜೀರು ಕೋಡಿ ಮಜಲು ಎಂಬಲ್ಲಿನ ಎರಡು ಮನೆಗಳಿಗೆ ಜೂ.15ರಂದು ಮಧ್ಯರಾತ್ರಿಯ ವೇಳೆ 4 ಮಂದಿ ಅಪರಿಚಿತ ವ್ಯಕ್ತಿಗಳು ಮನೆಗೆ ಪ್ರವೇಶಿಸಿ ಯಾರನ್ನೋ ಹುಡುಕುವ ನೆಪದಲ್ಲಿ ಮನೆ ಜಾಲಾಡಿರುವುದು ಮನೆಮಂದಿ ಮಾತ್ರವಲ್ಲದೆ ಸ್ಥಳೀಯ ಪರಿಸರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜೂ.15ರಂದು ರಾತ್ರಿ ಇಲ್ಲಿನ ನಿವಾಸಿ ಪುರುಷೋತ್ತಮ ಎಂಬವರ ಮನೆಯಲ್ಲಿ ದೈವಗಳಿಗೆ ಪರ್ವ ಇದ್ದು ಮನೆಮಂದಿ ಮಾತ್ರವಲ್ಲದೆ ಮನೆಗೆ ಬಂದ ನೆಂಟರಿಷ್ಟರು ಊಟಮುಗಿಸಿ ಚಾವಡಿಯಲ್ಲಿ ನಿದ್ರೆಗೆ ಜಾರಿದ್ದರು. ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ 4 ಮಂದಿ ಮನೆ ಬಾಗಿಲು ಬಡಿದಿದ್ದು, ಬಾಗಿಲು ತೆರಯುತ್ತಿದ್ದಂತೆಯೇ ಏಕಾಏಕಿ ಮನೆಯೊಳಗೆ ನುಗ್ಗಿ ಮನೆಯ ಕೋಣೆಗಳನ್ನು ಹುಡುಕಾಡಿದ್ದಾರೆ. ಅಪರಿಚಿತ ವ್ಯಕ್ತಿಗಳ ವರ್ತನೆಯಿಂದ ಚಾವಡಿಯಲ್ಲಿ ಮಲಗಿದ್ದ ಮಹಿಳೆಯರು ಭಯಬೀತರಾಗಿದ್ದರು.
ಈ ಸಂದರ್ಭ ಪರುಷೋತ್ತಮ ಅವರು ಪ್ರಶ್ನಿಸಿದಾಗ ಒಂದು ಭಾವಚಿತ್ರವನ್ನು ತೋರಿಸಿ ಈತನ ಪರಿಚಯ ಇದೇಯಾ? ಇವನು ನಿಮ್ಮ ಮನೆಗೆ ಬಂದಿದ್ದಾನ? ಎಂದು ಪ್ರಶ್ನಿಸಿದ್ದಾರೆ. ಈತನ ಪರಿಚಯ ಇಲ್ಲ ಎಂದಾಗ ಹೊರ ಹೋಗಿದ್ದಾರೆ. ಬಳಿಕ ಸಮೀಪದ ಹೇಮಾವತಿ ಎಂಬವರ ಮನೆಗೆ ಪ್ರವೇಶಿಸಿ ಕದ ತಟ್ಟಿದ್ದಾರೆ. ಆ ಮನೆಯಲ್ಲಿ ಅನಾರೋಗ್ಯ ಪೀಡಿತೆ ಸೇರಿದಂತೆ ಮೂರು ಮಂದಿ ಮಹಿಳೆಯರೇ ಇದ್ದು ಮನೆಮಂದಿ ಬೆಚ್ಚಿ ಬಾಗಿಲು ತೆರೆದಿರಲಿಲ್ಲ. ಸ್ವಲ್ಪ ಹೊತ್ತುಗಳ ಕಾಲ ಬಾಗಿಲಿಗೆ ಬೂಟು ಕಾಲಿನಿಂದ ಬಡಿದ್ದಿದ್ದು ಮನೆಮಂದಿ ಯಾರೆಂದು ಒಳಗಿನಿಂದಲೇ ಪ್ರಶ್ನಿಸಿದಾಗ ಅಲ್ಲಿಂದ ತೆರಳಿದ್ದಾರೆ. ಈ ವ್ಯಕ್ತಿಗಳು ಕಾರು ಹಾಗೂ ಜೀಪಿನಲ್ಲಿ ಬಂದಿರುವುದನ್ನು ಸ್ಥಳೀಯರು ಗುರುತಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ಈ ವರ್ತನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಮನೆಗೆ ಬಂದವರು ಪೊಲೀಸರೋ ಅಥವಾ ಆಗಂತುಕರೋ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!