ಸೆ. 22 ರಂದು ಪಿಎಸ್‌ಐ ಪರೀಕ್ಷೆ ಪಕ್ಕಾ: ಗೊಂದಲಗಳಿಗೆ ತೆರೆ ಎಳೆದ KEA!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಪ್ಟೆಂಬರ್ 22 ರಂದು ನಿಗದಿಯಾಗಿರುವ ಪಿಎಸ್‌ಐ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳ ಒಟ್ಟು 164 ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆಯನ್ನು ಸೆ.22ರಂದು ನಡೆಸಲು ತಯಾರಿ ನಡೆದಿದ್ದು, ಹೆಚ್ಚಿನ ನಿಗಾ ಇಡಲು ಪೊಲೀಸ್ ಇಲಾಖೆಯ ನೆರವು ಕೂಡ ಕೋರಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.

ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಮಂದಿ ಲಿಖಿತ ಪರೀಕ್ಷೆ ಬರೆಯಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ ಎಂದು ಪ್ರಸನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪರೀಕ್ಷೆ ಮುಂದೂಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದು, ಅದಕ್ಕೆ ಯಾರೂ ಕಿವಿಗೊಡಬಾರದು ಮನವಿ ಮಾಡಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಈ ಪರೀಕ್ಷೆ ಮುಂದೂಡಲಾಗಿದೆ. ಪುನಃ ಹಾಗೆಯೇ ಮಾಡಿದರೆ ಪರೀಕ್ಷೆ ನಡೆಸುವುದು ಯಾವಾಗ? ಇಷ್ಟಕ್ಕು ಯಾವುದಾದರು ಒಂದು ಪರೀಕ್ಷೆ ಇದ್ದೇ ಇರುತ್ತದೆ. ಹಾಗಂತ ಪರೀಕ್ಷೆ ಇಲ್ಲದ ದಿನ ಹುಡುಕುವುದು ಕೂಡ ಕಷ್ಟ. ನಾವು ಈ ದಿನಾಂಕವನ್ನು ಮೂರು ತಿಂಗಳ ಮೊದಲೇ ತೀರ್ಮಾನಿಸಿದ್ದು, ಆ ಪ್ರಕಾರ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವಿಮಾನ ನಿಲ್ದಾಣಗಳಲ್ಲಿ ಯಾವ ರೀತಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಾರೋ ಅದೇ ರೀತಿಯ ತಪಾಸಣೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ನಡೆಯುತ್ತದೆ. ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳ ಹೆಬ್ಬೆಟ್ಟು ಗುರುತು ಹಾಗೂ ಭಾವಚಿತ್ರವನ್ನು ಸಂಗ್ರಹಿಸಿಕೊಂಡಿದ್ದು, ಅದೇ ಡಾಟಾ ಇಟ್ಟುಕೊಂಡು ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ನಕಲಿ ಅಭ್ಯರ್ಥಿಗಳು ನುಸುಳುವುದಕ್ಕೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!